ಕ್ರೀಡೆ

ಕ್ರಿಕೆಟ್​ನಿಂದ ನಿವೃತ್ತಿ ಹಿಂಪಡೆದ ರಾಸ್​ ಟೇಲರ್​; ಬೇರೆ ದೇಶದ ಪರ ಆಡಲು ಸಿದ್ಧ!

ವೆಲ್ಲಿಂಗ್ಟನ್​: ನ್ಯೂಜಿಲೆಂಡ್​ನ ಮಾಜಿ ಬ್ಯಾಟರ್​ ರಾಸ್​ ಟೇಲರ್​ ಕ್ರಿಕೆಟ್​ ನಿವೃತ್ತಿಯನ್ನು ಹಿಂಪಡೆದಿದ್ದು, ಮುಂದಿನ ತಿಂಗಳು ಓಮನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಅರ್ಹತಾ ಟೂರ್ನಿಯಲ್ಲಿ ಸಮೋವಾ ದೇಶದ ಪರ ಕಣಕ್ಕಿಳಿಯಲಿದ್ದಾರೆ.

ಸಮೋವಾ ಕೇವಲ 2 ಲಕ್ಷ ಜನಸಂಖ್ಯೆಯ ಓಶಿಯಾನಿಯಾದ ದ್ವೀಪರಾಷ್ಟ್ರವಾಗಿದ್ದು, 1962ರಲ್ಲಿ ನ್ಯೂಜಿಲೆಂಡ್​ನಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು. ಟೇಲರ್​ ಅವರ ತಾಯಿ ಸಮೋವಾ ದೇಶದವರೇ ಆಗಿದ್ದರು. 41 ವರ್ಷದ ಟೇಲರ್​ 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು.

ನ್ಯೂಜಿಲೆಂಡ್​ ಪರ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ 100ಕ್ಕೂ ಅಧಿಕ ಪಂದ್ಯ ಆಡಿದ ಏಕೈಕ ಆಟಗಾರರಾಗಿರುವ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟಾರೆ 18 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. 2021ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ವಿಜೇತ ಕಿವೀಸ್​ ತಂಡದ ಭಾಗವೂ ಆಗಿದ್ದರು.