ನವದೆಹಲಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಬಳಿಕ ಭಾರತ ತಂಡದ ಪ್ರಮುಖ ಆಟಗಾರರಾದ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆಯಲಿದ್ದು, ಫೆಬ್ರವರಿ 6ರಿಂದ ಪ್ರವಾಸಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ 5 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ರೋಹಿತ್, ಕೊಹ್ಲಿ ಈಗಾಗಲೆ ಟಿ20ಯಿಂದ ನಿವೃತ್ತಿ ಹೊಂದಿದ್ದರೆ, ಬುಮ್ರಾ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ. ಫೆಬ್ರವರಿ 19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪೂರ್ವಭಾವಿ, ಕಾರ್ಯದೊತ್ತಡ ತಗ್ಗಿಸುವ ದೃಷ್ಟಿಯಿಂದಲೂ ಈ ಮೂವರಿಗೆ ವಿರಾಮ ನೀಡಲಾಗುತ್ತಿದೆ. ಆಸೀಸ್ ವಿರುದ್ಧದ ಹಾಲಿ ಸರಣಿಯ ಮೊದಲ 4 ಪಂದ್ಯಗಳಲ್ಲಿ ಬುಮ್ರಾ ಈಗಾಗಲೆ 141.2 ಓವರ್ಗಳನ್ನು ಎಸೆದಿದ್ದಾರೆ.
ಅಲ್ಲದೆ ಭಾರತ ತಂಡ ಮುಂದಿನ 2 ವರ್ಷಗಳ ಅವಧಿಯಲ್ಲಿ ಅಂದರೆ 2026ರ ಡಿಸೆಂಬರ್ವರೆಗೆ ಒಟ್ಟು 34ರಿಂದ 36 ಏಕದಿನ ಪಂದ್ಯಗಳನ್ನು ಆಡಲಿದೆ. ಹೀಗಾಗಿ ಆಯ್ಕೆ ಸಮಿತಿ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಹಿರಿಯ ಆಟಗಾರರ ಒತ್ತಡ ತಗ್ಗಿಸಲು ಬಯಸಿದೆ ಎನ್ನಲಾಗಿದೆ.