ಕ್ರೀಡೆ

ಹಿರಿಯ ಆಟಗಾರರ ಹಠಾತ್​ ನಿವೃತ್ತಿ; ಗೌರವಯುತ ವಿದಾಯಕ್ಕೆ ಅವರೆಲ್ಲ ಅರ್ಹರು ಎಂದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ! |Senior Cricketer

Senior Cricketer: ಹಿರಿಯ ಆಟಗಾರರ ಟೆಸ್ಟ್ ನಿವೃತ್ತಿಯ ಬಗ್ಗೆ ಸ್ಪಷ್ಟವಾಗಿ ಸಂವಹನ ನಡೆಸದ ಬಿಸಿಸಿಐ ವಿರುದ್ಧ ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಕೆ ಶ್ರೀಕಾಂತ್, ಕೊಹ್ಲಿ ಮತ್ತು ರೋಹಿತ್ ನಿವೃತ್ತಿ ವಿಷಯದಲ್ಲಿ ಬಿಸಿಸಿಐ ನಡೆದುಕೊಂಡ ರೀತಿ ದಿಗ್ಗಜ ಆಟಗಾರರ ಸ್ಥಾನಮಾನಕ್ಕೆ ತಕ್ಕ ಪುರಸ್ಕಾರವಲ್ಲ, ಅವರೆಲ್ಲ ಗೌರವಯುತ ವಿದಾಯಕ್ಕೆ ಅರ್ಹರು ಎಂದು ಅಸಮಧಾನ ವ್ಯಕ್ತಪಡಿಸಿದರು.

ಯಾವುದೇ ಆಟಗಾರ ದೇಶದ ಪರ ನೂರು ಟೆಸ್ಟ್ ಪಂದ್ಯಗಳನ್ನು ಆಡಿದರೆ, ಅದೊಂದು ಸಾಧನೆ, ಆದ್ದರಿಂದ ಅವರ ನಿವೃತ್ತಿಯ ಸಂದರ್ಭದಲ್ಲಿ ಅವರಿಗೆ ಉತ್ತಮ ಬೀಳ್ಕೊಡುಗೆ ಸಿಗಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತರಾದಾಗ ಆಟಗಾರರು ಮತ್ತು ಆಡಳಿತ ಮಂಡಳಿ ನಡುವೆ ದೊಡ್ಡ ಸಂವಹನದ ಅಂತರವಿತ್ತು ಎನ್ನುವುದು ಸ್ಪಷ್ಟ, ಆಟಗಾರರೊಂದಿಗೆ ಸಂಬಂಧಪಟ್ಟವರು ಮಾತನಾಡಬೇಕಿತ್ತು. ಈ ತರಹದ ಬೆಳವಣಿಗೆಗಳು ಭಾರತೀಯ ಕ್ರಿಕೆಟ್‌ಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

ಮೇ ತಿಂಗಳಲ್ಲಿ ಕೊಹ್ಲಿ ಮತ್ತು ರೋಹಿತ್ ಅವರ ಹಠಾತ್ ನಿವೃತಿಯ ನಿರ್ಧಾರ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ತಂದಿತ್ತು, ಈ ದಿಗ್ಗಜ ಜೋಡಿ ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಯ್ಕೆಯಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಐಪಿಎಲ್ ಮಧ್ಯದಲ್ಲಿಯೇ ರೋಹಿತ್ ಶರ್ಮಾ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ ತಮ್ಮ ಟೆಸ್ಟ್ ನಿವೃತ್ತಿಯನ್ನು ಘೋಷಿಸಿದರು. ಕೇವಲ ಐದು ದಿನಗಳ ನಂತರ, ವಿರಾಟ್ ಕೊಹ್ಲಿ ಕೂಡ ಅದೇ ಹಾದಿ ತುಳಿದರು.

ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರು ವಿದಾಯ ಪಂದ್ಯವಿಲ್ಲದೆ ಹಠಾತ್ ನಿರ್ಗಮನ ಘೋಷಿಸಿದ್ದು ಅನೇಕ ಹಿರಿಯ ಆಟಗಾರರ ಬೇಸರಕ್ಕೆ ಕಾರಣವಾಗಿತ್ತು. ಇತ್ತೀಚೆಗೆ ಚೇತೇಶ್ವರ ಪೂಜಾರ ನಿವೃತ್ತಿ ಘೋಷಿಸಿದ ನಂತರ ಮತ್ತೆ ಚರ್ಚೆ ತೀವ್ರಗೊಂಡಿದೆ.(ಏಜೆನ್ಸೀಸ್​)