ಕ್ರೀಡೆ

ಆಂಗ್ಲರ ಬಾಜ್​ಬಾಲ್​ಗೆ ರೋಹಿತ್​ ಶರ್ಮ ಟಾಂಗ್​; ರಿಷಭ್​ ಪಂತ್ ​ಹೆಸರು ಉಲ್ಲೇಖಿಸಿದ್ದೇಕೆ?

ಧರ್ಮಶಾಲಾ: "ಬಾಜ್​ಬಾಲ್​ ಎಂದರೆ ಏನೆಂದು ನನಗೆ ಇದುವರೆಗೆ ಅರ್ಥವೇ ಆಗಿಲ್ಲ' ಎಂದು ಧರ್ಮಶಾಲಾ ಟೆಸ್ಟ್​ಗೆ ಮುನ್ನ ಆಂಗ್ಲರಿಗೆ ಟಾಂಗ್​ ನೀಡಿರುವ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ, ಜೈಸ್ವಾಲ್​ ಬಾಜ್​ಬಾಲ್​ನಿಂದಲೇ ಸ್ಫೂರ್ತಿ ಪಡೆದು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ ಎಂಬ ಇಂಗ್ಲೆಂಡ್​ ಬ್ಯಾಟರ್​ ಬೆನ್​ ಡಕೆಟ್​ ಹೇಳಿಕೆಯನ್ನೂ ತಳ್ಳಿಹಾಕಿದ್ದಾರೆ.

"ನಮ್ಮ ತಂಡದಲ್ಲಿ ರಿಷಭ್​ ಪಂತ್​ ಎಂಬ ಆಟಗಾರನೊಬ್ಬನಿದ್ದಾನೆ. ಬಹುಶ@ ಬೆನ್​ ಡಕೆಟ್​ ಆತನ ಆಟವನ್ನು ನೋಡಿಲ್ಲವೆನಿಸುತ್ತದೆ' ಎಂದು ರೋಹಿತ್​ ನಗುತ್ತಲೇ ತಿರುಗೇಟು ನೀಡಿದ್ದಾರೆ. ಈ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಆಕ್ರಮಣಕಾರಿ ಹೊಸದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜತೆಗೆ ಆಂಗ್ಲರು ಕಳೆದ ಸಲಕ್ಕಿಂತ ಈ ಬಾರಿ ಟೆಸ್ಟ್​ ಸರಣಿಯಲ್ಲಿ ಉತ್ತಮವಾಗಿ ಆಡಿದ್ದಾರೆ ಎಂಬುದನ್ನು ರೋಹಿತ್​ ಒಪ್ಪಿಕೊಂಡಿದ್ದಾರೆ.

ರೋಹಿತ್​ ನಾಯಕತ್ವಕ್ಕೆ ಯಶ

ವಿರಾಟ್​ ಕೊಹ್ಲಿ, ಮೊಹಮದ್​ ಶಮಿ ಅವರಂಥ ಪ್ರಮುಖ ಆಟಗಾರರು ಸಂಪೂರ್ಣ ಸರಣಿಗೆ ಗೈರಾದರೆ, ಕೆಎಲ್​ ರಾಹುಲ್​ ಗಾಯ, ಶ್ರೇಯಸ್​ ಅಯ್ಯರ್​ ಫಾರ್ಮ್​ ಕೊರತೆಯಿಂದ ಹೊರಗುಳಿದರು. ಬುಮ್ರಾ, ಸಿರಾಜ್​ ಆವರ್ತನ ಪದ್ಧತಿಯಂತೆ ವಿರಾಮ ಪಡೆದರು. ಇದರ ನಡುವೆಯೂ ಯುವ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯ ನಾಯಕ ರೋಹಿತ್​ ಶರ್ಮಗೆ ಸಲ್ಲಬೇಕು. ಜತೆಗೆ ಕೋಚ್​ ರಾಹುಲ್​ ದ್ರಾವಿಡ್​ ಅವರ ಮಾರ್ಗದರ್ಶನವೂ ನಿರ್ಣಾಯಕವೆನಿಸಿದೆ. ಪ್ರಮುಖವಾಗಿ ಸರಣಿಯಲ್ಲಿ ಕಣಕ್ಕಿಳಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್​, ಧ್ರುವ ಜುರೆಲ್​, ಸರ್ಫ್ರಾಜ್​​ ಖಾನ್​, ಆಕಾಶ್​ ದೀಪ್​ ಯಶ ಕಂಡಿದ್ದು, ಭವಿಷ್ಯದ ಬಗ್ಗೆಯೂ ಆಶಾಕಿರಣ ಮೂಡಿಸಿದ್ದಾರೆ.