ಕ್ರೀಡೆ

ರೋಹಿತ್​ ಮಾತ್ರವಲ್ಲ ವಿರಾಟ್​ಗೂ ತಪ್ಪಿರಲಿಲ್ಲ ಟೀಕೆ! ಶಮಾ ಹಳೆಯ ಟ್ವೀಟ್​ ಪೋಸ್ಟ್​ ವೈರಲ್​ | Rohit Sharma Remark

Rohit Sharma Remark: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮರನ್ನು ದಡೂತಿ ಕ್ರಿಕೆಟಿಗ, ತೂಕ ಇಳಿಸಿಕೊಳ್ಳಬೇಕು ಎಂದೆಲ್ಲಾ ಟೀಕಿಸಿದ ಕಾಂಗ್ರೆಸ್​ ವಕ್ತಾರೆ ಶಮಾ ಮೊಹಮ್ಮದ್​, ತಮ್ಮ ಹೇಳಿಕೆಯಿಂದ ಭಾರೀ ವಿವಾದಕ್ಕೆ ಗುರಿಯಾಗಿದ್ದಾರೆ. ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅವರನ್ನು ಟೀಕಿಸುವ ಭರದಲ್ಲಿ ವಿವಾದ ಸುಳಿಗೆ ಸಿಲುಕಿರುವ ಶಮಾ, ಸದ್ಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದರೆ, ಇಂತಹ ಟೀಕೆ, ವ್ಯಂಗ್ಯವಾಡುವ ಮನಸ್ಥಿತಿ ಶಮಾಗೆ ಮೊದಲೇನಲ್ಲ ಎಂಬುದಕ್ಕೆ ವೈರಲ್ ಆದ ಈ ಹಳೆಯ ಪೋಸ್ಟ್​ ಸಾಕ್ಷಿ.

ರೋಹಿತ್ ಒಬ್ಬ ದಢೂತಿ ದೇಹದ ಕ್ರಿಕೆಟಿಗ ಎಂಬ ಶಮಾ ಹೇಳಿಕೆಗೆ ಸದ್ಯ ದೇಶವ್ಯಾಪಿ ಕ್ರಿಕೆಟ್​ ಪ್ರಿಯರು ಮತ್ತು ರಾಜಕೀಯ ವಲಯದಿಂದ ವ್ಯಾಪಕ ಖಂಡನೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ. ಭಾರೀ ವಿರೋಧಗಳ ಬಳಿಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಶಮಾ ಮೊಹಮ್ಮದ್​, "ಒಬ್ಬ ಕ್ರಿಕೆಟಿಗನ ಫಿಟ್ನೆಸ್​ ಬಗ್ಗೆ ನಾನು ಅಭಿಪ್ರಾಯ ಹೊರಹಾಕಿದ್ದೇನೆ. ಇದರಲ್ಲಿ ತಪ್ಪೇನಿದೆ. ನಮಗೆ ಮಾತನಾಡುವ ಸ್ವಾತಂತ್ರ್ಯವಿಲ್ಲವೇ" ಎಂದು ಹೇಳಿದ್ದಾರೆ. ಅಸಲಿಗೆ ಶಮಾ ರೋಹಿತ್​ ವಿರುದ್ಧ ಮಾತ್ರ ಮಾತನಾಡಿಲ್ಲ. ಈ ಹಿಂದೆ ಟೀಮ್ ಇಂಡಿಯಾ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವಿರುದ್ಧವೂ ಟೀಕಿಸಿದ್ದಾರೆ.

2018ರಲ್ಲಿ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಾಕಿದ್ದ ಶಮಾ ಮೊಹಮ್ಮದ್, ಆ ವರ್ಷದಲ್ಲಿ ಟೀಮ್ ಇಂಡಿಯಾವನ್ನು ಕ್ಯಾಪ್ಟನ್ ಆಗಿ ಮುನ್ನಡೆಸುತ್ತಿದ್ದ ವಿರಾಟ್​ರನ್ನು ಭಾಷಾ ವಿಚಾರಕ್ಕೆ ಟೀಕಿಸಿದ್ದರು. ಕ್ರಿಕೆಟ್ ಅಭಿಮಾನಿಯೊಬ್ಬನ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದ ವಿರಾಟ್, "ಇಂಗ್ಲಿಷ್ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಇಷ್ಟಪಡುವವರು ಭಾರತದಲ್ಲಿ ವಾಸಿಸಬಾರದು" ಎಂದು ಹೇಳಿದ್ದರು. ಇದಕ್ಕೆ ವಿರಾಟ್​ರನ್ನು ತರಾಟೆಗೆ ತೆಗೆದುಕೊಂಡಿದ್ದ ಶಮಾ, ವಿರಾಟ್​ ವಿರುದ್ಧವೂ ಕಿಡಿಕಾರಿದ್ದರು.

"ಬ್ರಿಟಿಷ್ ಕಂಡುಹಿಡಿದ ಆಟವನ್ನು ಆಡುತ್ತಿರುವ ವಿರಾಟ್​, ವಿದೇಶಿ ಬ್ರ್ಯಾಂಡ್‌ಗಳನ್ನು ಅನುಮೋದಿಸುವ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ಇಟಲಿಯಲ್ಲಿ ಮದುವೆ ಆಗ್ತಾರೆ. ಹರ್ಷೆಲ್ ಗಿಬ್ಸ್ ತಮ್ಮ ನೆಚ್ಚಿನ ಕ್ರಿಕೆಟಿಗ ಮತ್ತು ಏಂಜೆಲಿಕ್ ಕೆರ್ಬರ್​ರನ್ನು ಅತ್ಯುತ್ತಮ ಟೆನಿಸ್ ಆಟಗಾರ್ತಿ ಎಂದು ಹೆಸರಿಸುತ್ತಾರೆ. ಆದರೆ, ವಿದೇಶಿ ಆಟಗಾರರನ್ನು ಪ್ರೀತಿಸುವ ಭಾರತೀಯರಿಗೆ ದೇಶ ತೊರೆಯುವಂತೆ ಹೇಳುತ್ತಾರೆ" ಎಂದು ಟ್ವೀಟ್​ ಮಾಡಿದ್ದರು. ಕೊಹ್ಲಿ ಬಗ್ಗೆ ಶಮಾ ಮಾಡಿದ್ದ ಹಳೆಯ ಟ್ವೀಟ್ ಸದ್ಯ ವೈರಲ್​ ಆಗಿದ್ದು, ಟೀಕೆಯ ಪಟ್ಟಿಯಲ್ಲಿ ರೋಹಿತ್ ಮಾತ್ರವಲ್ಲ ಕೊಹ್ಲಿ ಕೂಡ ಇದ್ದಾರೆ ಎಂದು ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).