ಕ್ರೀಡೆ

ಈ ವಿಷಯದಲ್ಲಿ ವಿರಾಟ್​ಗಿಂತಲೂ ಕ್ಯಾಪ್ಟನ್ ರೋಹಿತ್ ಶರ್ಮ ಬೆಸ್ಟ್​: ಮೊಹಮ್ಮದ್​ ಜಾಹಿದ್

ಕೊಲಂಬೊ: ನಿನ್ನೆ (ಆ.07) ಇಲ್ಲಿನ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಕಡೆಯ ಏಕದಿನ ಸರಣಿಯ ಪಂದ್ಯದಲ್ಲಿ 110 ರನ್​ಗಳಿಂದ ಹೀನಾಯ ಸೋಲು ಅನುಭವಿಸಿದ ಭಾರತಕ್ಕೆ ಸಿರೀಸ್ ಟೈ ಮಾಡಿಕೊಳ್ಳುವ ಅವಕಾಶ ಸಂಪೂರ್ಣವಾಗಿ ಕೈತಪ್ಪಿತು. ಕೇವಲ 138 ರನ್​ ಕಲೆಹಾಕಲು ಶಕ್ತವಾದ ಭಾರತ, ಆಲ್​ಔಟ್ ಆಗುವ ಮೂಲಕ ಆತಿಥೇಯರ ಎದುರು ಭಾರೀ ಮುಖಭಂಗವನ್ನು ಅನುಭವಿಸಿತು. ಸದ್ಯ ಟೀಮ್ ಇಂಡಿಯಾ ಸೋಲಿಗಾಗಿ ಕಾದುಕುಳಿತ್ತಿದ್ದ ಪಾಕ್ ಕ್ರಿಕೆಟಿಗರು ಇದೀಗ ಒಬ್ಬರಂತೆ ಒಬ್ಬರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕುತ್ತಿದ್ದಾರೆ. ಈ ಸಾಲಿಗೆ ಈಗ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್​ ಜಾಹಿದ್​ ಸೇರ್ಪಡೆಗೊಂಡಿದ್ದಾರೆ.

ಟೀಮ್ ಇಂಡಿಯಾಗೆ ಜಸ್ಪ್ರಿತ್ ಬುಮ್ರಾ ಇಲ್ಲದಿದ್ದರೆ ಇಡೀ ತಂಡವೇ ಶೂನ್ಯ. ಅವರಲ್ಲಿ ಬೌಲಿಂಗ್​ ಯೂನಿಟ್ ಬಲವಾಗಿಲ್ಲ. ಸಂಪೂರ್ಣವಾಗಿ ಬುಮ್ರಾರನ್ನೇ ನಂಬಿಕೊಂಡಿದ್ದಾರೆ ಎಂದು ಜುನೈದ್ ಖಾನ್​ ಟೀಕಿಸಿದ್ದರು. ಇದೀಗ ಖಾನ್ ಬೆನ್ನಲ್ಲೇ ಮಾತನಾಡಿರುವ ಜಾಹಿದ್​, "ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿರಾಟ್​ಗಿಂತಲೂ ಭಾರತ ತಂಡದ ಕ್ಯಾಪ್ಟನ್ ರೋಹಿತ್ ಶರ್ಮ ಅತ್ಯುತ್ತಮ ಎಂದು ಹೊಗಳಿದ್ದಾರೆ. ಈ ವಿಷಯದಲ್ಲಿ ಕೊಹ್ಲಿ ಬದಲು ನಾನು ಶರ್ಮರನ್ನು ಮೆಚ್ಚುವೆ" ಎಂದಿದ್ದಾರೆ.

"ರೋಹಿತ್ ಬ್ಯಾಟಿಂಗ್ ವೈಖರಿ ನಿಜಕ್ಕೂ ಮೆಚ್ಚುವಂತದ್ದು. ಅವರು ಕ್ರೀಸ್​ನಲ್ಲಿ ನಿಂತು, ಬಾಲ್​ ಎದುರಿಸುವ ರೀತಿ ಬಹಳ ಚೆನ್ನಾಗಿದೆ. ಶರ್ಮರ ಬ್ಯಾಟಿಂಗ್ ಶೈಲಿಯನ್ನು ನೋಡಿದಾಗ ನನಗೆ ಇಂಜಮಾಮ್-ಉಲ್-ಹಕ್ ಅವರೇ ನೆನಪಾಗುತ್ತಾರೆ. ರೋಹಿತ್​ ಉಲ್​-ಹಕ್​ರನ್ನು ಹೋಲುತ್ತಾರೆ. ನನಗೆ ವಿರಾಟ್​ ಕ್ಲಾಸ್​ ಅಂತ ಗೊತ್ತಿದೆ. ಆದ್ರೆ, ಈ ವಿಷಯದಲ್ಲಿ ರೋಹಿತ್​ ಅವರಿಗಿಂತಲೂ ಒಂದೆಜ್ಜೆ ಮುಂದಿದ್ದಾರೆ. ಪ್ರಸ್ತುತ ಕ್ರಿಕೆಟ್ ಜಗತ್ತಿನಲ್ಲಿ ನನ್ನ ಪ್ರಕಾರ ರೋಹಿತ್​ ಅವರೇ ಬೆಸ್ಟ್"​ ಎಂದು ಹೇಳಿದ್ದಾರೆ.

"ಕಳೆದ ವರ್ಷಗಳಲ್ಲಿ ರೋಹಿತ್ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ತಮ್ಮ ಬ್ಯಾಟಿಂಗ್ ಶೈಲಿಯನ್ನು ಉತ್ತಮವಾಗಿ ಕಾರ್ಯನಿರ್ವಹಿಸುವ ಶರ್ಮ, ಮೈದಾನದಲ್ಲಿ ಎದುರಿಸುವ ಮೊದಲ ಬಾಲ್​ನಿಂದ ಕೊನೆಯ ಬಾಲ್​ವರೆಗೆ ಅತ್ಯುತ್ತಮ ಶಾಟ್ಸ್​ಗಳನ್ನು ಆಡುತ್ತಾರೆ. ಅವರ ಬ್ಯಾಟಿಂಗ್ ವೈಖರಿ ತಂಡದ ಇತರೆ ಕ್ರಿಕೆಟಿಗರಿಗೂ ಮಾದರಿಯಾಗಿದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತಂಡಕ್ಕಾಗಿ ಅತ್ಯಧಿಕ ರನ್​ ಗಳಿಸಿದ ರೋಹಿತ್, ಅಂದು ಟೀಮ್ ಇಂಡಿಯಾವನ್ನು ಫೈನಲ್ ಪ್ರವೇಶಿಸುವಂತೆ ಮಾಡಿದ್ದರು" ಎಂದು ಹೇಳಿದ್ದಾರೆ.

ಸದ್ಯ ಜಾಹಿದ್​ ಅವರ ಈ ಹೇಳಿಕೆ ಒಂದು ರೀತಿ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ವಿರಾಟ್​ರನ್ನು ಹೋಲಿಸಿ ಹೇಳುವ ಅವಶ್ಯಕತೆ ಇರಲಿಲ್ಲವೇನೋ ಎಂದು ಅಭಿಪ್ರಾಯಿಸುವಂತೆ ಮಾಡಿದೆ,(ಏಜೆನ್ಸೀಸ್).