ರೋಹಿತ್​ ಶರ್ಮ ಸಂಗ್ರಹ ಚಿತ್ರ
ಕ್ರೀಡೆ

ವಿಜಯ್​ ಹಜಾರೆ ಟ್ರೋಫಿಯಲ್ಲಿ ರೋಹಿತ್ ಶರ್ಮ​ ಕಣಕ್ಕೆ

ವಿಜಯ್​ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಲು ಲಭ್ಯನಿದ್ದೇನೆ ಎಂದು 39 ವರ್ಷದ ರೋಹಿತ್​ ಶರ್ಮ ಮುಂಬೈ ಕ್ರಿಕೆಟ್​ ಸಂಸ್ಥೆಗೆ (ಎಂಸಿಎ) ತಿಳಿಸಿದ್ದಾರೆ.

ಮುಂಬೈ: ಅನುಭವಿ ಬ್ಯಾಟರ್​ ರೋಹಿತ್​ ಶರ್ಮ ಮುಂದಿನ ವರ್ಷದ ಐಪಿಎಲ್​ನಲ್ಲಿ ಮತ್ತೆ ಮುಂಬೈ ಇಂಡಿಯನ್ಸ್​ ತಂಡದ ನಾಯಕನ ಪಟ್ಟಕ್ಕೇರಲಿದ್ದಾರೆ ಎಂಬ ವರದಿಯ ನಡುವೆ ದೇಶೀಯ ಕ್ರಿಕೆಟ್​ನಲ್ಲಿ ವಿಜಯ್​ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮತ್ತಷ್ಟು ಸಂಭ್ರಮ ತಂದಿದೆ.

ವಿಜಯ್​ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಲು ಲಭ್ಯನಿದ್ದೇನೆ ಎಂದು 39 ವರ್ಷದ ರೋಹಿತ್​ ಶರ್ಮ ಮುಂಬೈ ಕ್ರಿಕೆಟ್​ ಸಂಸ್ಥೆಗೆ (ಎಂಸಿಎ) ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ಆಡಿದ ಬಳಿಕ ರೋಹಿತ್​ ಮುಂಬೈ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಡಿಸೆಂಬರ್​ 13ರಿಂದ 19ರವರೆಗೆ ನಡೆಯಲಿದ್ದರೆ, ವಿಜಯ್​ ಹಜಾರೆ ಟ್ರೋಫಿಯ ಲೀಗ್​ ಹಂತ ಡಿಸೆಂಬರ್​ 14ರಿಂದ 29ರವರೆಗೆ ನಡೆಯಲಿದೆ. ಹೀಗಾಗಿ ರೋಹಿತ್​ ಆರಂಭಿಕ 2&3 ಲೀಗ್​ ಪಂದ್ಯಗಳ ಬಳಿಕ ಮುಂಬೈ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ.

ವಿಜಯ್​ ಹಜಾರೆ ಟ್ರೋಫಿಯ ನಾಕೌಟ್​ ಹಂತ 2027ರ ಜನವರಿ 2ರಿಂದ 8ರವರೆಗೆ ನಡೆಯಲಿದೆ. ಆದರೆ ಮುಂಬೈ ತಂಡ ನಾಕೌಟ್​ ಹಂತಕ್ಕೇರಿದರೂ ರೋಹಿತ್​ ಲಭ್ಯರಾಗುವುದಿಲ್ಲ. ಯಾಕೆಂದರೆ ಜನವರಿ 3ರಿಂದ ಭಾರತ ತಂಡ ತವರಿನಲ್ಲಿ ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ.

ರೋಹಿತ್​ ಕಳೆದ ವರ್ಷವೂ ವಿಜಯ್​ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದರು. ಜೈಪುರದಲ್ಲಿ 2 ಪಂದ್ಯಗಳನ್ನು ಆಡಿದ್ದ ಅವರು, ಸಿಕ್ಕಿಂ ವಿರುದ್ಧ 94 ಎಸೆತಗಳಲ್ಲಿ 155 ರನ್​ ಸಿಡಿಸಿದ್ದರೆ, 2 ದಿನಗಳ ಬಳಿಕ ಉತ್ತರಾಖಂಡ ವಿರುದ್ಧ ಗೋಲ್ಡನ್​ ಡಕ್​ಗೆ ಔಟಾಗಿದ್ದರು. ಅದಕ್ಕೆ ಮುನ್ನ 2018ರಲ್ಲಿ ಕೊನೆಯದಾಗಿ ಅವರು ಈ ಟೂರ್ನಿಯಲ್ಲಿ ಆಡಿದ್ದರು.