ಕ್ರೀಡೆ

ನೆದರ್ಲೆಂಡ್ ವಿರುದ್ಧ 7 ವಿಶ್ವ ದಾಖಲೆಗಳನ್ನು ಬರೆಯಲು ಸಜ್ಜಾದ ಹಿಟ್​ಮ್ಯಾನ್

ಬೆಂಗಳೂರು: ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಭಾರತ ತನ್ನ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್​ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಭಾರತ ತನ್ನ ಅಜೇಯ ಓಟವನ್ನು ಮುಂದುವರೆಸಲು ಸಜ್ಜಾಗಿದೆ.

ಹಾಲಿ ವಿಶ್ವಕಪ್​ ಟೂರ್ನಿಯಲ್ಲಿ ಭರ್ಜರಿ ಫಾರ್ಮ್​ನಲ್ಲಿರುವ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ 122.77 ಸರಾಸರಿಯಲ್ಲಿ 1 ಶತಕ, 2 ಅರ್ಧಶತಕದ ನೆರವಿನಿಂದ 442ರನ್​ ಗಳಿಸಿದ್ದಾರೆ. ಪವರ್​ಪ್ಲೇನಲ್ಲಿ ಬೌಲರ್​ಗಳನ್ನು ಚಂಡಾಡುತ್ತಿರುವ ರೋಹಿತ್​ ಎದುರಾಳಿ ಪಡೆಗೆ ನಡುಕ ಹುಟ್ಟಿಸಿದ್ದಾರೆ. ನೆದರ್ಲೆಂಡವವ ವಿರುದ್ಧದ ಪಂದ್ಯದಲ್ಲಿ ರೋಹಿತ್​ 7 ವಿಶ್ವ ದಾಖಲೆಗಳನ್ನು ಸರಿಗಟ್ಟುವ ಅವಕಾಶ ಹೊಂದಿದ್ದು, ಹಿಟ್​ಮ್ಯಾನ್ ಯಶಸ್ವಿಯಾಗಲಿದ್ದಾರ ಎಂದು ಕಾದು ನೋಡಬೇಕಿದೆ.

ಅತಿ ಹೆಚ್ಚು ಸಿಕ್ಸರ್

ರೋಹಿತ್ ಪ್ರಸಕ್ತ ವರ್ಷದಲ್ಲಿ (2023) ಈವರೆಗೂ 24 ಏಕದಿನ ಪಂದ್ಯಗಳನ್ನಾಡಿದ್ದು, 58 ಸಿಕ್ಸರ್​ ಸಿಡಿಸಿದ್ದಾರೆ. ಆ ಮೂಲಕ ಕ್ಯಾಲೆಂಡರ್​ ವರ್ಷದಲ್ಲಿ ಅಧಿಕ ಸಿಕ್ಸರ್​ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರೋಹಿತ್​, ಎಬಿ ಡಿವಿಲಿಯರ್ಸ್ ಜೊತೆ ಜಂಟಿ ದಾಖಲೆ ಹೊಂದಿದ್ದಾರೆ. ಇನ್ನೊಂದು ಸಿಕ್ಸರ್​ ಸಿಡಿಸಿದರೆ ಎಬಿಡಿ 2015ರ ವರ್ಷದಲ್ಲಿ ಬಾರಿಸಿದ್ದ 58 ಸಿಕ್ಸರ್​​​ಗಳ ದಾಖಲೆ ಮುರಿಯಲಿದ್ದಾರೆ. ಎಬಿಡಿ ಅಂದು ಕೇವಲ 20 ಇನ್ನಿಂಗ್ಸ್​​ಗಳಲ್ಲಿ ಈ 58 ಸಿಕ್ಸರ್​​ ಬಾರಿಸಿದ್ದರು.

ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್​​ಗಳು

ರೋಹಿತ್​ ಶರ್ಮಾ ತಮ್ಮ ವೃತ್ತಿಜೀವನದಲ್ಲಿ ಈವರೆಗೂ ಆಡಿರುವ 25 ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ 45 ಸಿಕ್ಸರ್​ ಸಿಡಿಸಿದ್ದಾರೆ. ನೆದರ್ಲೆಂಡ್ಸ್ ಎದುರು 5 ಸಿಕ್ಸರ್​ ಸಿಡಿಸುವಲ್ಲಿ ಯಶಸ್ವಿಯಾದರೆ, ವಿಶ್ವಕಪ್ ಇತಿಹಾಸದಲ್ಲಿ ಸಿಕ್ಸರ್​ ಕಿಂಗ್ ಎನಿಸಿಕೊಳ್ಳಲಿದ್ದಾರೆ. ಆ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ವೆಸ್ಟ್​ ಇಂಡೀಸ್ ದಿಗ್ಗಜ ಕ್ರಿಸ್​ ಗೇಲ್ ಸಿಡಿಸಿರುವ 49 ಸಿಕ್ಸರ್​​ಗಳ ದಾಖಲೆಯನ್ನು ಬ್ರೇಕ್ ಮಾಡಿ ನೂತನ ಸಿಕ್ಸರ್​ ಆಗಿ ಹೊರಹೊಮ್ಮಲಿದ್ದಾರೆ.

ಎರಡನೇ ಭಾರತೀಯ

ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳಲ್ಲಿ 442 ರನ್ ಗಳಿಸಿರುವ ರೋಹಿತ್, 500 ರನ್ ಪೂರ್ಣಗೊಳಿಸಲು 58 ರನ್​ಗಳ ಅಗತ್ಯ ಇದೆ. ಇದು ಸಾಧ್ಯವಾದರೆ ಎರಡು ಆವೃತ್ತಿಗಳಲ್ಲಿ 500+ ರನ್ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಲಿದ್ದಾರೆ. ಸಚಿನ್ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. 1996ರಲ್ಲಿ 523 ರನ್ ಗಳಿಸಿದ್ದ ಸಚಿನ್, 2003ರ ವಿಶ್ವಕಪ್​​ನಲ್ಲಿ 673 ರನ್ ಬಾರಿಸಿದ್ದರು.​ 2019ರ ವಿಶ್ವಕಪ್​ನಲ್ಲಿ 648 ರನ್ ಗಳಿಸಿದ್ದ ರೋಹಿತ್​ಗೆ ಈ ದಾಖಲೆ ಸರಿಗಟ್ಟುವ ಅವಕಾಶ ಇದೆ.

ನಾಯಕನಾಗಿ ಅತಿ ಹೆಚ್ಚು ರನ್

ವಿಶ್ವಕಪ್ ಆವೃತ್ತಿಯೊಂದರಲ್ಲಿ ಭಾರತೀಯ ನಾಯಕನಿಂದ ಅತಿಹೆಚ್ಚು ರನ್ ಗಳಿಸಿದ ದಾಖಲೆ ಸೌರವ್ ಗಂಗೂಲಿ ಹೆಸರಿನಲ್ಲಿದೆ. 2003ರ ವಿಶ್ವಕಪ್​​​ನಲ್ಲಿ ಗಂಗೂಲಿ 11 ಪಂದ್ಯಗಳಲ್ಲಿ 465 ರನ್ ಗಳಿಸಿದ್ದರು. ಸದ್ಯ ರೋಹಿತ್ 8 ಪಂದ್ಯಗಳಲ್ಲಿ 442 ರನ್ ಸಿಡಿಸಿದ್ದಾರೆ. ಇನ್ನು 24 ರನ್ ಗಳಿಸಿದರೆ ಗಂಗೂಲಿ ದಾಖಲೆ ಮುರಿದು ವಿಶ್ವಕಪ್ ಆವೃತ್ತಿಯೊಂದರಲ್ಲಿ ಅಧಿಕ ರನ್ ಗಳಿಸಿದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಅತಿ ಹೆಚ್ಚು ಪಂದ್ಯಗಳ ಗೆಲುವು

ಭಾರತವು ಭಾನುವಾರ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದರೆ ರೋಹಿತ್​, ಏಕದಿನ ವಿಶ್ವಕಪ್​​​​ನ ಒಂದೇ ಆವೃತ್ತಿಯಲ್ಲಿ 9 ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನು ಗೆದ್ದ ಭಾರತದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ನಂತರ ರೋಹಿತ್ ಸ್ಥಾನ ಪಡೆದಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ 2003ರಲ್ಲಿ ಭಾರತ ಸತತ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಗಂಗೂಲಿ ದಾಖಲೆಯನ್ನು ರೋಹಿತ್ ಸಮಬಲ ಸಾಧಿಸಿದ್ದು, ಇನ್ನೊಂದು ಪಂದ್ಯ ದಾಖಲೆ ಗೆದ್ದರೆ ಮುರಿಯಲಿದ್ದಾರೆ.

ವಿಶ್ವಕಪ್​ನಲ್ಲಿ ವೇಗದ 1500 ರನ್

ಏಕದಿನ ವಿಶ್ವಕಪ್​​ನಲ್ಲಿ ರೋಹಿತ್​ ಶರ್ಮಾ 1500 ರನ್ ಗಳಿಸಿದ ವೇಗದ ಬ್ಯಾಟರ್​ ಆಗುವ ಅವಕಾಶ ಹೊಂದಿದ್ದಾರೆ. ಈವರೆಗೂ ವಿಶ್ವಕಪ್ ಇತಿಹಾಸದಲ್ಲಿ ನಾಲ್ವರು ಬ್ಯಾಟ್ಸ್​​ಮನ್​ಗಳು ಮಾತ್ರ 1500 ರನ್​​ಗಳ ದಾಟಿದ್ದಾರೆ. ನೆದರ್ಲೆಂಡ್ಸ್ ಎದುರು 80 ರನ್ ಗಳಿಸಲು ಹಿಟ್​ಮ್ಯಾನ್ ಯಶಸ್ವಿಯಾದರೆ, ಈ ಪಟ್ಟಿಗೆ ಸೇರಲಿರುವ 5ನೇ ಬ್ಯಾಟರ್ ಎನಿಸಲಿದ್ದಾರೆ. ಹಾಗೆಯೇ ಅತ್ಯಂತ ಕಡಿಮೆ 26 ಇನ್ನಿಂಗ್ಸ್​​​ಗಳಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

11 ತಂಡಗಳ ಎದುರು ಶತಕದ ಸಾಧನೆ

ನೆದರ್ಲೆಂಡ್ಸ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸಿದರೆ, ಮತ್ತೊಂದು ಮೈಲಿಗಲ್ಲು ತಲುಪಲಿದ್ದಾರೆ. ರಿಕಿ ಪಾಟಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್​​ನಲ್ಲಿ 11 ತಂಡಗಳ ಎದುರು ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಇದೀಗ ರೋಹಿತ್​ಗೆ ಈ ಅವಕಾಶ ಸಿಕ್ಕಿದ್ದು, ಈ ದಾಖಲೆ ಬರೆಯುವ ವಿಶ್ವದ 3ನೇ ಬ್ಯಾಟ್ಸ್​ಮನ್ ಎನಿಸಲಿದ್ದಾರೆ.