ಕ್ರೀಡೆ

ಟಿ20 ಫಾರ್ಮೆಟ್​ನಿಂದ ನಿವೃತ್ತಿ ಹೊಂದಿದ್ದೇನೆ ಆದ್ರೆ.. ತನ್ನನ್ನು ಬೆಂಬಲಿಸಿದ ಫ್ಯಾನ್ಸ್​​ಗೆ ರೋಹಿತ್​ ಹೇಳಿದ್ದಿಷ್ಟು!

ಬಾರ್ಬಡೋಸ್​: ನಿನ್ನೆ (ಜೂ.30) ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್​ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಭಾರತ, 17 ವರ್ಷಗಳ ಬಳಿಕ ವಿಶ್ವಕಪ್​ ಟ್ರೋಫಿಯನ್ನು ಎತ್ತಿಹಿಡಿದಿದೆ. ಟೀಮ್ ಇಂಡಿಯಾ ಜಯವನ್ನು ತಮ್ಮ ಗೆಲುವು ಎಂದೇ ಸಂಭ್ರಮಿಸಿದ ಭಾರತೀಯರು, ಸಿಹಿ ಹಂಚಿ, ಕುಣಿದು ಕುಪ್ಪಳಿಸಿದರು.

ವಿಶ್ವಕಪ್ ಟೂರ್ನಿ ಆರಂಭದ ಮೊದಲ ಪಂದ್ಯದಿಂದಲೂ ಸತತ ಗೆಲುವನ್ನು ನೋಡಿಕೊಂಡು ಬಂದ ಭಾರತ, ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ, ಗೆದ್ದು ಬೀಗಿದ ಕ್ಷಣ ನಿಜಕ್ಕೂ ರೋಮಾಂಚಕ. ಟೀಮ್ ಇಂಡಿಯಾಗೆ ವಿಶ್ವಕಪ್​ ಕಿರೀಟ ತಂದುಕೊಟ್ಟ ನಂತರ 'ರನ್ ಮಷಿನ್' ವಿರಾಟ್​ ಕೊಹ್ಲಿ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದರು. ಅವರ ಬೆನ್ನಲ್ಲೇ ಇಂದು ರೋಹಿತ್​ ಶರ್ಮಾ ಕೂಡ ನಿವೃತ್ತಿ ಘೋಷಣೆ ಮಾಡಿದರು. ಈ ಸಂಗತಿ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಬೇಸರ ತಂದೊಡ್ಡಿತು.

ಇನ್ನು ಅಂತಾರಾಷ್ಟ್ರೀಯ ಟಿ20 ಫಾರ್ಮೆಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಮಾತನಾಡಿದ ರೋಹಿತ್ ಶರ್ಮ, "ಈ ಮಾದರಿಗೆ ವಿದಾಯ ಹೇಳಲು ಇದೇ ಸೂಕ್ತ ಸಮಯ. ತಂಡಕ್ಕೆ ವಿಶ್ವಕಪ್ ಗೆಲುವು ಬಹಳ ಮುಖ್ಯವಾಗಿತ್ತು. ಬಹುದಿನಗಳ ಆಸೆ ಇಂದು ಈಡೇರಿದೆ. ನನಗೆ ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರಸ್ತುತ ಟಿ20ಗೆ ನಿವೃತ್ತಿ ಘೋಷಿಸಿದ್ದೇನೆ. ಆದರೆ, ಟೆಸ್ಡ್​ ಮತ್ತು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಈ ಸರಣಿಗಳಲ್ಲಿ ಆಡುವುದನ್ನು ಮುಂದುವರೆಸುವೆ" ಎಂದು ಹೇಳಿದರು,(ಏಜೆನ್ಸೀಸ್).