ನವದೆಹಲಿ: ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ನೋವು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮರನ್ನು ಇಂದಿಗೂ ಕಾಡುತ್ತಿದೆಯಂತೆ. ಸದ್ಯ ರೋಹಿತ್ ಪಡೆ ಟಿ20 ವಿಶ್ವಕಪ್ ಆಡುತ್ತಿದೆ. ಮೊದಲ ಲೀಗ್ ಪಂದ್ಯದಲ್ಲೇ ಐರ್ಲೆಂಡ್ ತಂಡವನ್ನು ಮಣಿಸಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ರೋಹಿತ್, ಅರ್ಧಶತಕ ಬಾರಿಸಿ ಮಿಂಚಿದರು. ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿತ್, ಇತ್ತೀಚೆಗೆ ವಿಶ್ವಕಪ್ ಫೈನಲ್‌ನಲ್ಲಿ ಸೋತ ನಂತರ ತಮ್ಮ ಪತ್ನಿ ರಿತಿಕಾ ಸಾಜ್ದೇಹ್ ಆಡಿದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.
ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಸೋತ ನಂತರ ನಾನು ಡ್ರೆಸ್ಸಿಂಗ್ ರೂಮ್ ಕಡೆಗೆ ಓಡಿದೆ. ನನಗೆ ಅಲ್ಲಿ ಉಳಿಯುವ ಮೂಡ್ ಸಹ ಇರಲಿಲ್ಲ. ನೀವು ಏನನ್ನಾದರೂ ಬಯಸಿದಾಗ ಮತ್ತು ಅದನ್ನು ಪಡೆಯದೆ ಇದ್ದಾಗ, ನೀವು ನಿರಾಶೆಗೊಳ್ಳುತ್ತೀರಿ ಮತ್ತು ಕೋಪಗೊಳ್ಳುತ್ತೀರಿ ಹಾಗೂ ಎಲ್ಲ ನಕಾರಾತ್ಮಕ ಆಲೋಚನೆಗಳು ನಿಮ್ಮ ತಲೆಯಲ್ಲಿ ಓಡುತ್ತವೆ. ಆ ಕ್ಷಣದಲ್ಲಿ, ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಯೋಚಿಸಲು ಸಹ ಸಾಧ್ಯವಿಲ್ಲ ಎಂದು ರೋಹಿತ್ ಹೇಳಿದರು.
ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಮರುದಿನ ಬೆಳಗೆ ನನಗೆ ಎಚ್ಚರವಾಯಿತು. ರಾತ್ರಿಗೂ ಮುಂಚೆ ಏನಾಗಿದೆ ಎಂಬ ಅರಿವು ಸಹ ನನಗೆ ಇರಲಿಲ್ಲ. ಅದನ್ನು ಅರ್ಥ ಮಾಡಿಕೊಳ್ಳಲು ಸಹ ನನಗೆ ಆಗುತ್ತಿರಲಿಲ್ಲ. ನಾನು ನನ್ನ ಪತ್ನಿ ರಿತಿಕಾ ಜತೆ ಮಾತನಾಡಿ, ರಾತ್ರಿ ನನಗೆ ಭಾರತ ಸೋತಿದೆ ಎಂದು ಕನಸು ಕಂಡೆ. ನಾಳೆ ಫೈನಲ್ ಪಂದ್ಯ ಆಡಬೇಕಿದೆ ಎಂದು ಹೇಳಿದೆ. ಆದರೆ, ಶೀಘ್ರದಲ್ಲೇ ನನಗೆ ವಾಸ್ತವ ಏನೆಂಬುದು ತಿಳಿಯಿತು ಮತ್ತು ಆ ಕಹಿ ಸತ್ಯವನ್ನು ನಾಲ್ಕೈದು ದಿನಗಳ ಕಾಲ ಅರಗಿಸಿಕೊಳ್ಳಲು ಆಗಲೇ ಇಲ್ಲ. ಆದರೆ, ನಾವು ಅಂತಿಮ ಪಂದ್ಯದಲ್ಲಿ ಸೋತಿದ್ದೇವೆ, ಅಲ್ಲಿ ಪ್ರತಿಯೊಬ್ಬ ಆಟಗಾರನೂ ತೀವ್ರ ನಿರಾಶೆಗೊಂಡಿದ್ದಾನೆ. ಆ ಸಮಯದಲ್ಲಿ, ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ನಾವು ಎಲ್ಲ ಕೋಪ ಮತ್ತು ನಿರಾಶೆಯನ್ನು ಎದುರಿಸಿದ್ದೇವೆ ಎಂದು ವಿಶ್ವಕಪ್ ಸೋಲಿನ ಬಗ್ಗೆ ರೋಹಿತ್ ಶರ್ಮ ಹೇಳಿದರು.
ಅಂದಹಾಗೆ 2023ರ ಏಕದಿನ ವಿಶ್ವಕಪ್‌ನ ಫೈನಲ್‌ನಲ್ಲಿ ಟೀಂ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ ಶುಭಮನ್ ಗಿಲ್ 7 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 47 ರನ್ ಗಳಿಸಿ ಔಟಾದರು. ರೋಹಿತ್ ಇಡೀ ಟೂರ್ನಿಯಲ್ಲಿ ಆಡಿದಂತೆ ಫೈನಲ್ನಲ್ಲೂ ಆಕ್ರಮಣಕಾರಿಯಾಗಿ ಆಡಲು ಪ್ರಯತ್ನಿಸಿದರು. ಆದರೆ, ದುರದೃಷ್ಟವಶಾತ್ 47 ರನ್ ಗಳಿಸಿ ಔಟಾದರು. ಇದರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಕೂಡ ಔಟಾದರು.
ಇದಾದ ಬಳಿಕ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಇನ್ನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಈ ಅನುಕ್ರಮದಲ್ಲಿ ಕೊಹ್ಲಿ ಮತ್ತು ರಾಹುಲ್ ಸ್ವಲ್ಪ ನಿಧಾನವಾಗಿ ಆಡಿದರು. ಕೊಹ್ಲಿ 63 ಎಸೆತಗಳಲ್ಲಿ 54 ರನ್ ಮತ್ತು ಕೆಎಲ್ ರಾಹುಲ್ 107 ಎಸೆತಗಳಲ್ಲಿ 66 ರನ್ ಗಳಿಸಿ ಔಟಾದರು. ಮಧ್ಯಮ ಓವರ್‌ಗಳಲ್ಲಿ ಅತ್ಯಂತ ನಿಧಾನವಾಗಿ ಬ್ಯಾಟ್ ಬೀಸಿದ ಕೊಹ್ಲಿ-ರಾಹುಲ್ ಜೋಡಿ ಇನ್ನಿಂಗ್ಸ್ಗೆ ವೇಗ ನೀಡುವ ಸಮಯಕ್ಕೆ ಸರಿಯಾಗಿ ಔಟಾದರು. ಇದಾದ ನಂತರ ಜಡೇಜಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ವಿಫಲರಾದರು. ಇದರಿಂದಾಗಿ ಟೀಂ ಇಂಡಿಯಾ ಕೇವಲ 240 ರನ್ ಗಳಿಸಿತು. ಟೀಮ್ ಇಂಡಿಯಾದ ನೀಡಿದ ಈ ಗುರಿಯನ್ನು ಕೇವಲ 43 ಓವರ್‌ಗಳಲ್ಲಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮೂರನೇ ಬಾರಿಗೆ ವಿಶ್ವಕಪ್ ಗೆಲ್ಲುವ ಭಾರತದ ಆಸೆಯನ್ನು ಹುಸಿಗೊಳಿಸಿತು. (ಏಜೆನ್ಸೀಸ್)