ಕ್ರೀಡೆ

ರೋಹಿತ್ ಶರ್ಮ ಸಹಿತ ಐವರಿಗೆ ಕ್ಲೀನ್‌ಚಿಟ್, ಸಿಡ್ನಿ ಟೆಸ್ಟ್ ಆಡಲು ಲಭ್ಯ

ಪ್ರಸಾದ್​ ಶೆಟ್ಟಿಗಾರ್​

ಮೆಲ್ಬೋರ್ನ್/ಸಿಡ್ನಿ: ಬಯೋ-ಬಬಲ್ ಉಲ್ಲಂಘಿಸಿದ ಆರೋಪ ಎದುರಿಸಿದ ರೋಹಿತ್ ಶರ್ಮ ಸಹಿತ ಟೀಮ್ ಇಂಡಿಯಾದ ಐವರು ಕ್ರಿಕೆಟಿಗರಿಗೆ ಕ್ಲೀನ್‌ಚಿಟ್ ನೀಡಲಾಗಿದೆ. ಇದರಿಂದಾಗಿ ಅವರು ಸಿಡ್ನಿ ಟೆಸ್ಟ್‌ನಲ್ಲಿ ಆಡಲು ಲಭ್ಯರಾಗಿದ್ದಾರೆ. ರಿಷಭ್ ಪಂತ್, ಶುಭಮಾನ್ ಗಿಲ್, ನವದೀಪ್ ಸೈನಿ ಮತ್ತು ಪೃಥ್ವಿ ಷಾ ಕ್ಲೀನ್‌ಚಿಟ್ ಪಡೆದ ಇತರ ನಾಲ್ವರು. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಬಿಸಿಸಿಐ ಜಂಟಿಯಾಗಿ ಪ್ರಕರಣದ ತನಿಖೆ ನಡೆಸಿತ್ತು.

ಆಟಗಾರರು ಮೆಲ್ಬೋರ್ನ್‌ನ ಒಳಾಂಗಣ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವ ವಿಡಿಯೋವನ್ನು ಕ್ರಿಕೆಟ್ ಪ್ರೇಮಿಯೊಬ್ಬ ಟ್ವಿಟರ್‌ನಲ್ಲಿ ಪ್ರಕಟಿಸಿದ ಬಳಿಕ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಯ ಆರೋಪ ಎದುರಾಗಿತ್ತು. ಇದರಿಂದ ಐವರು ಕ್ರಿಕೆಟಿಗರನ್ನು ಐಸೋಲೇಷನ್‌ನಲ್ಲೂ ಇಡಲಾಗಿತ್ತು. ಆದರೆ ಅಭ್ಯಾಸ ನಡೆಸಲು ಅವಕಾಶ ನೀಡಲಾಗಿತ್ತು.

ಆಟಗಾರರ ವರದಿ ನೆಗೆಟಿವ್

ಭಾರತ ಕ್ರಿಕೆಟ್ ತಂಡದ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿ ವರ್ಗದವರ ಕರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಬಿಸಿಸಿಐ ತಿಳಿಸಿದೆ. ಗುರುವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಎಲ್ಲರನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಮವಾರವಷ್ಟೇ ಭಾರತ ತಂಡ ಸಿಡ್ನಿಗೆ ಬಂದಿಳಿಯಿತು. ಬಯೋ-ಬಬಲ್ ಉಲ್ಲಂಘಿಸಿದ ಆರೋಪ ಎದುರಿಸಿದ ರೋಹಿತ್ ಸಹಿತ ಐವರ ವರದಿ ಕೂಡ ನೆಗೆಟಿವ್ ಬಂದಿದೆ.

ನಾಲ್ಕು ಪಂದ್ಯಗಳ ಸರಣಿ ಸದ್ಯ 1-1 ರಿಂದ ಸಮಬಲದಲ್ಲಿದೆ. ಅಡಿಲೇಡ್‌ನಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ದಾಖಲಿಸಿದರೆ, ಮೆಲ್ಬೋರ್ನ್‌ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಗೆಲುವು ಕಂಡಿತ್ತು.

ಟೆಸ್ಟ್ ಸ್ಥಳಾಂತರಕ್ಕೆ ಭಾರತ ಬೇಡಿಕೆ ಇಟ್ಟಿಲ್ಲ

ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಕಠಿಣ ಕ್ವಾರಂಟೈನ್ ನಿಯಮದಿಂದಾಗಿ ಬ್ರಿಸ್ಬೇನ್‌ನಲ್ಲಿ ನಿಗದಿಯಾಗಿರುವ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಸ್ಥಳಾಂತರಗೊಳಿಸಲು ಭಾರತ ತಂಡ ಬೇಡಿಕೆ ಇಟ್ಟಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸ್ಪಷ್ಟಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೇ, ಕ್ವೀನ್ಸ್‌ಲ್ಯಾಂಡ್ಸ್‌ನಲ್ಲಿರುವ ನಿಯಮಗಳಿಗೆ ಭಾರತ ತಂಡ ಬದ್ಧವಾಗಿದೆ. ಈ ಕುರಿತು ಬಿಸಿಸಿಐ ಜತೆ ಪ್ರತಿದಿನ ಮಾತನಾಡುತ್ತಿರುವೆ. ಕ್ವಾರಂಟೈನ್ ನಿಯಮದ ಕುರಿತು ಭಾರತದಿಂದ ಯಾವುದೇ ತಕರಾರಿಲ್ಲ. ನಿಗದಿಯಂತೆ ಪಂದ್ಯವಾಡಲು ಉಭಯ ತಂಡಗಳು ಸನ್ನದ್ಧವಾಗಿವೆ’ ಎಂದು ಹಾಕ್ಲೇ ಹೇಳಿದ್ದಾರೆ. 4ನೇ ಪಂದ್ಯ ಗಾಬಾ ಸ್ಟೇಡಿಯಂನಲ್ಲಿ ಜನವರಿ 15ರಂದು ಆರಂಭಗೊಳ್ಳಲಿದೆ. ಕ್ವೀನ್ಸ್‌ಲ್ಯಾಂಡ್ (ಬ್ರಿಸ್ಬೇನ್) ಮತ್ತು ನ್ಯೂ ಸೌತ್ ವೇಲ್ಸ್ (ಸಿಡ್ನಿ) ರಾಜ್ಯ ಸರ್ಕಾರಗಳ ಗಡಿ ನಿರ್ಬಂಧದಿಂದಾಗಿ ಈ ಸಮಸ್ಯೆ ತಲೆದೂರಿದೆ. ಹಾರ್ಡ್ ಕ್ವಾರಂಟೈನ್‌ನಿಂದ ವಿನಾಯಿತಿ ದೊರೆತರಷ್ಟೇ ಭಾರತ ಬ್ರಿಸ್ಬೇನ್‌ಗೆ ಪ್ರಯಾಣ ಬೆಳೆಸಲಿದೆ. ಇಲ್ಲವಾದಲ್ಲಿ ಭಾರತ 4ನೇ ಟೆಸ್ಟ್ ಪಂದ್ಯವನ್ನು ಬಹಿಷ್ಕರಿಸುವ ಸಾಧ್ಯತೆಗಳಿವೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಸಿಡ್ನಿ ಟೆಸ್ಟ್ ಪ್ರೇಕ್ಷಕರ ಸಂಖ್ಯೆ ಶೇ. 25ಕ್ಕೆ ಇಳಿಕೆ

ಭಾರತ ಹಾಗೂ ಆಸ್ಟ್ರೇಲಿಯ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಶೇಕಡ 25ಕ್ಕೆ ಇಳಿಸಲು ಆಯೋಜಕರು ತೀರ್ಮಾನಿಸಿದ್ದಾರೆ. ನಗರದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯೂ ಸೌತ್ ವೇಲ್ಸ್ ಸರ್ಕಾರದ ಸೂಚನೆಯಂತೆ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಿಡ್ನಿ ಮೈದಾನದ ಪ್ರೇಕ್ಷಕರ ಸಾಮರ್ಥ್ಯ 38 ಸಾವಿರವಿದ್ದು, ಪ್ರತಿದಿನ 9500 ಸಾವಿರ ಮಂದಿಗಷ್ಟೇ ಅವಕಾಶ ನೀಡಲಾಗುತ್ತದೆ. ‘ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಪ್ರೇಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ಟಿಕೆಟ್ ಬುಕ್ ಮಾಡಿರುವವರ ಮೊತ್ತವನ್ನು ವಾಪಸ್ ನೀಡಲಾಗುವುದು. ಸಾಮಾಜಿಕ ಅಂತರ ದೃಷ್ಟಿಯಿಂದ ಸೀಟ್ ವ್ಯವಸ್ಥೆ ಮಾಡಲಾಗುವುದು’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ನಿಕ್ ಹಾಕ್ಲೇ ತಿಳಿಸಿದ್ದಾರೆ.

ವೇಗಿ ಪ್ಯಾಟಿನ್‌ಸನ್ ಅಲಭ್ಯ

ಪಕ್ಕೆಲುಬು ನೋವಿನಿಂದಾಗಿ ಆಸ್ಟ್ರೇಲಿಯಾ ವೇಗಿ ಜೇಮ್ಸ್ ಪ್ಯಾಟಿನ್‌ಸನ್ 3ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಪ್ಯಾಟಿನ್‌ಸನ್ ಬದಲಿಗೆ ಬೇರೆ ಆಟಗಾರನನ್ನು ಹೆಸರಿಸಿಲ್ಲ. ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಪ್ಯಾಟಿನ್‌ಸನ್ ಫಿಟ್ನೆಸ್‌ಅನ್ನು ಮತ್ತೆ ಪರಿಶೀಲಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಪ್ಯಾಟಿನ್‌ಸನ್ ತಮ್ಮ ಮನೆಯಲ್ಲಿ ಬಿದ್ದಿದ್ದರಿಂದ ಪೆಕ್ಕಲುಬು ನೋವಿಗೆ ತುತ್ತಾಗಿದ್ದರು. ಪ್ಯಾಟಿನ್‌ಸನ್ ಆರಂಭಿಕ ಎರಡೂ ಪಂದ್ಯಗಳಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.