ಮುಂಬೈ: ಕಳೆದ ವರ್ಷ ನಾಯಕತ್ವದಿಂದ ತೆಗೆದುಹಾಕಿದ ಬಳಿಕ ರೋಹಿತ್ ಶರ್ಮ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳ ನಡುವೆ ಅವರು ಮುಂಬೈ ಇಂಡಿಯನ್ಸ್ ತಂಡದಲ್ಲೇ ರಿಟೇನ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಅವರೊಂದಿಗೆ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಮುಂಬೈನಲ್ಲೇ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ನಾಲ್ವರು ಆಟಗಾರರ ರಿಟೇನ್ಗೆ ಮುಂಬೈ ತಂಡ ಎಷ್ಟು ಸಂಭಾವನೆ ನೀಡಲಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನಾಲ್ವರು ಆಟಗಾರರನ್ನು ಉಳಿಸಿಕೊಂಡರೆ ಮುಂಬೈ ತಂಡ ಒಟ್ಟು 120 ಕೋಟಿ ರೂ. ಬಜೆಟ್ ಪೈಕಿ 61 ಕೋಟಿ ರೂ. ಮೊತ್ತವನ್ನು ಹಂಚಿಕೆ ಮಾಡಬಹುದಾಗಿದೆ. ನಂತರ ವಿಕೆಟ್ ಕೀಪರ್&ಬ್ಯಾಟರ್ ಇಶಾನ್ ಕಿಶನ್ ಮತ್ತು ಆಸ್ಟ್ರೆಲಿಯಾದ ಟಿಮ್ ಡೇವಿಡ್ರನ್ನು ಹರಾಜಿನಲ್ಲಿ ರೈಟ್ ಟು ಮ್ಯಾಚ್ ಮೂಲಕ ಉಳಿಸಿಕೊಳ್ಳಲಿದೆ ಎನ್ನಲಾಗಿದೆ.
ಬಿಸಿಸಿಐ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18,14, 11, 18, 14 ಕೋಟಿ ರೂ. ಅಂದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕು ಎಂದಿದೆ. ಜತೆಗೆ 3 ಆಟಗಾರರ ರಿಟೇನ್ಗೆ ಒಟ್ಟು 43 ಕೋಟಿ ರೂ. ಮತ್ತು 4 ಆಟಗಾರರ ರಿಟೇನ್ಗೆ 61 ಕೋಟಿ ರೂ. ವ್ಯಯಿಸಬೇಕಿದ್ದು, ಇದನ್ನು ಆಟಗಾರರಿಗೆ ಹೇಗೆ ಬೇಕಾದರೂ ಹಂಚಿಕೆ ಮಾಡಬಹುದು ಎನ್ನಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ರಿಯಾನ್ ಪರಾಗ್ ರಿಟೇನ್ ಮಾಡಿಕೊಳ್ಳಲು ಬಯಸಿದೆ. ಲಖನೌ ಸೂಪರ್ಜೈಂಟ್ಸ್ ತಂಡ ಆಯುಷ್ ಬಡೋನಿ, ಮೊಹ್ಸಿನ್ ಖಾನ್ ಮತ್ತು ನಿಕೋಲಸ್ ಪೂರನ್ ರಿಟೇನ್ಗೆ ನಿರ್ಧರಿಸಿದೆ. ಆದರೆ ಕನ್ನಡಿಗ ಕೆಎಲ್ ರಾಹುಲ್ ರಿಟೇನ್ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡ ಅರ್ಷದೀಪ್ ಸಿಂಗ್, ಶಶಾಂಕ್ ಸಿಂಗ್ ಮತ್ತು ಆಶುತೋಷ್ ಶರ್ಮ ರಿಟೇನ್ ಮಾಡಿಕೊಳ್ಳಲು ಬಯಸಿದೆ.