ಕ್ರೀಡೆ

ರೋಹಿತ್ ಶರ್ಮ ಈಗ ಭಾರತದ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್

ದುಬೈ: ಆರಂಭಿಕ ರೋಹಿತ್ ಶರ್ಮ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಮೂಲಕ ಭಾರತದ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ವಿರಾಟ್ ಕೊಹ್ಲಿ 5ರಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

2 ವರ್ಷಗಳ ಹಿಂದಷ್ಟೇ ಆರಂಭಿಕರಾಗಿ ಟೆಸ್ಟ್ ಕ್ರಿಕೆಟ್‌ಗೆ ಮರುಪ್ರವೇಶ ಪಡೆದಿದ್ದ ರೋಹಿತ್ ಇದೇ ಮೊದಲ ಬಾರಿಗೆ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರ 5ರೊಳಗೆ ಸ್ಥಾನ ಸಂಪಾದಿಸಿದ್ದಾರೆ. ಮತ್ತೊಂದೆಡೆ ಕೊಹ್ಲಿ ಕಳೆದ 5 ವರ್ಷಗಳಲ್ಲಿ ಮೊದಲ ಬಾರಿಗೆ ಅಗ್ರ 5ರಿಂದ ಹೊರಬಿದ್ದಿದ್ದಾರೆ. ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಕೊಹ್ಲಿ ಹೊರತಾಗಿ ಬೇರೊಬ್ಬರು ಭಾರತದ ನಂ. 1 ಟೆಸ್ಟ್ ಬ್ಯಾಟ್ಸ್‌ಮನ್ ಎನಿಸಿದ್ದಾರೆ. 2017ರ ನವೆಂಬರ್‌ನಲ್ಲಿ ಚೇತೇಶ್ವರ ಪೂಜಾರ ಕೊನೆಯದಾಗಿ ಕೊಹ್ಲಿ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದರು.

ರಿಷಭ್ ಪಂತ್ ಅಗ್ರ 10ರಿಂದ ಹೊರಬಿದ್ದಿದ್ದು, 4 ಸ್ಥಾನ ಕುಸಿದು 12ನೇ ಸ್ಥಾನಕ್ಕಿಳಿದಿದ್ದಾರೆ. ಪೂಜಾರ 15ನೇ ಸ್ಥಾನಕ್ಕೇರಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ 10ರಿಂದ 9ನೇ ಸ್ಥಾನಕ್ಕೇರಿದ್ದರೆ, ಆರ್. ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ರೂಟ್ ವಿಶ್ವ ನಂ. 1

ಭಾರತ ವಿರುದ್ಧ ಹ್ಯಾಟ್ರಿಕ್ ಶತಕ ಸಿಡಿಸಿದ ಇಂಗ್ಲೆಂಡ್ ನಾಯಕ ಜೋ ರೂಟ್ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ತಾನಕ್ಕೇರಿದ್ದಾರೆ. ಸರಣಿಗೆ ಮುನ್ನ 5ನೇ ಸ್ಥಾನದಲ್ಲಿದ್ದ ರೂಟ್ ಇದೀಗ ಕೇನ್ ವಿಲಿಯಮ್ಸನ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್ ಮತ್ತು ಕೊಹ್ಲಿಯನ್ನು ಹಿಂದಿಕ್ಕಿ ವಿಶ್ವ ನಂ. 1 ಬ್ಯಾಟ್ಸ್‌ಮನ್ ಎನಿಸಿದ್ದಾರೆ. ರೂಟ್ ಈ ಮುನ್ನ 2015ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ನಂ. 1 ಪಟ್ಟಕ್ಕೇರಿದ್ದರು. ರೂಟ್, ವಿಲಿಯಮ್ಸನ್, ಕೊಹ್ಲಿ, ಸ್ಮಿತ್ ಹೊರತಾಗಿ ವಿಶ್ವ ನಂ. 1 ಪಟ್ಟಕ್ಕೇರಿರುವ ಕೊನೇ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌. ಅವರು 2015ರ ನವೆಂಬರ್‌ನಲ್ಲಿ ಈ ಸಾಧನೆ ಮಾಡಿದ್ದರು.