ನವದೆಹಲಿ: ಟಿ20 ವಿಶ್ವಕಪ್-2024 ಗೆಲ್ಲಲೇಬೇಕೆಂಬ ಗುರಿಯೊಂದಿಗೆ ಸಪ್ತಸಾಗರವನ್ನು ದಾಟಿ ಅಮೆರಿಕದಲ್ಲಿ ಬೀಡುಬಿಟ್ಟಿರುವ ಟೀಮ್ ಇಂಡಿಯಾ, ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಶನಿವಾರ (ಜೂನ್ 01) ನಡೆದ ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮ ಸೇನೆ 60 ರನ್ಗಳ ಭರ್ಜರಿ ಜಯ ಸಾಧಿಸಿತು.
ಮೊದಲು ಬ್ಯಾಟ್ ಮಾಡಿದ ಟೀಮ್ಇಂಡಿಯಾ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಟ್ರಿಕಿ ಪಿಚ್‌ನಲ್ಲಿ ರನ್ ಗಳಿಸುವುದು ಕಷ್ಟಕರವಾಗಿತ್ತು. ಇದರಿಂದಾಗಿ ಬಾಂಗ್ಲಾದೇಶ ಎಲ್ಲ ಓವರ್ಗಳನ್ನು ಆಡಿ 9 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಭಾರತ ಪ್ರಮುಖ ಪಂದ್ಯಗಳಿಗೂ ಮುನ್ನ ಹೆಚ್ಚಿನ ಆತ್ಮವಿಶ್ವಾಸವನ್ನು ಪಡೆದುಕೊಂಡಿದೆ. ಅಮೆರಿಕದ ಹವಾಮಾನ ಪರಿಸ್ಥಿತಿಗಳು ಮತ್ತು ಪಿಚ್‌ಗಳನ್ನು ಅರ್ಥಮಾಡಿಕೊಳ್ಳಲು ಇದು ತುಂಬಾ ಉಪಯುಕ್ತವಾಗಿದೆ. ಆಟಗಾರರಿಗೂ ಇದು ಉತ್ತಮ ಅಭ್ಯಾಸವಾಗಿದೆ.
ಅಭ್ಯಾಸ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ 19 ಎಸೆತಗಳಲ್ಲಿ 23 ರನ್ ಗಳಿಸಿದರು. ಬಿಗ್ ಶಾಟ್ಗಳನ್ನು ಆಡುವ ಮೂಲಕ ಮನರಂಜಿಸಿದರು. ಉಪನಾಯಕ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 40 ರನ್ ಗಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದು ತಂಡದ ಬೃಹತ್ ಸ್ಕೋರ್ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬಳಿಕ ಬೌಲಿಂಗ್ನಲ್ಲಿ 1 ವಿಕೆಟ್ ಪಡೆದು ಮಿಂಚಿದರು.
ಐಪಿಎಲ್-2024 ರಲ್ಲಿ ಹಾರ್ದಿಕ್ ಸಂಪೂರ್ಣ ಫ್ಲಾಪ್ ಆದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಹೊರತುಪಡಿಸಿ ನಾಯಕನಾಗಿಯೂ ನಿರಾಸೆ ಮೂಡಿಸಿದರು. ರೋಹಿತ್ ಮತ್ತು ಹಾರ್ದಿಕ್ ನಡುವೆ ನಾಯಕತ್ವದ ವಿವಾದ ಭುಗಿಲೇಳುತ್ತಿದ್ದಂತೆಯೇ ಹಾರ್ದಿಕ್ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಯಿತು. ಅದರಲ್ಲೂ ರೋಹಿತ್ ಅಭಿಮಾನಿಗಳು ಹಾರ್ದಿಕ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಇಬ್ಬರು ವಿಶ್ವಕಪ್‌ನಲ್ಲಿ ಹೇಗೆ ಆಡುತ್ತಾರೆ? ಇಬ್ಬರು ಒಟ್ಟಿಗೆ ತಂಡವನ್ನು ಮುನ್ನಡೆಸುತ್ತಾರಾ? ಎಂಬ ಅನುಮಾನಗಳು ಹುಟ್ಟಿಕೊಂಡವು. ಆದರೆ ಅಭ್ಯಾಸ ಪಂದ್ಯದ ಮೂಲಕ ಎಲ್ಲ ಅನುಮಾನಗಳು ಪರಿಹಾರವಾಯಿತು. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ.
ಕಪ್ ಗೆಲ್ಲ ಬೇಕಾದರೆ ರೋಹಿತ್ ಮತ್ತು ಹಾರ್ದಿಕ್ ಹಿಂದೆ ನಡೆದ ಎಲ್ಲವನ್ನೂ ಮರೆತುಬಿಡಬೇಕು ಎಂದು ಪಠಾಣ್ ಸಲಹೆ ನೀಡಿದ್ದಾರೆ. ಐಪಿಎಲ್‌ನಲ್ಲಿ ಏನಾಯಿತು ಎಂಬುದನ್ನು ಬಿಟ್ಟು, ಕೋಚ್ ರಾಹುಲ್ ದ್ರಾವಿಡ್ ಅವರು ಹೇಳುವುದನ್ನು ಕೇಳಬೇಕು ಎಂದು ಹೇಳಿದ್ದಾರೆ. ಭಾರತ ತಂಡಕ್ಕೆ ಹಿಟ್‌ಮ್ಯಾನ್ ಮತ್ತು ಪಾಂಡ್ಯ ಬಹಳ ಮುಖ್ಯ ಎಂದು ಪಠಾಣ್ ಹೇಳಿದರು.
ಮೆಗಾ ಟೂರ್ನಿಯಲ್ಲಿ ಆಡುವಾಗ ಐಪಿಎಲ್ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಐಪಿಎಲ್ ವಿಷಯಗಳನ್ನು ಬಿಟ್ಟು ಮುಂದುವರಿಯುವ ಸಮಯ ಬಂದಿದೆ. ಇಲ್ಲಿ ಒಮ್ಮೆಯೂ ಐಪಿಎಲ್ ಲೀಗ್ ವಿಷಯಗಳನ್ನು ಪ್ರಸ್ತಾಪಿಸಬಾರದು. ಹಾರ್ದಿಕ್ ಆಗಿರಲಿ ಅಥವಾ ರೋಹಿತ್ ಆಗಿರಲಿ, ಕೋಚ್ ರಾಹುಲ್ ದ್ರಾವಿಡ್ ಹೇಳುವುದರ ಮೇಲೆ ನೀವು ಗಮನ ಹರಿಸಬೇಕು. ತಂಡಕ್ಕೆ ಏನು ಬೇಕೋ ಅದನ್ನು ಮಾಡಿ ಎಂದು ಪಠಾಣ್ ಮಹತ್ವದ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)