ಕ್ರೀಡೆ

ಆಸ್ಟ್ರೇಲಿಯಾ ನೆಲದಲ್ಲಿ ಹಲವು ದಾಖಲೆಗಳ ನಿರೀಕ್ಷೆಯಲ್ಲಿ ರೋಹಿತ್​-ಕೊಹ್ಲಿ!

ಬೆಂಗಳೂರು: ಭಾರತ ತಂಡದ ಮಾಜಿ ನಾಯಕರು ಮತ್ತು ಸ್ಟಾರ್​ ಬ್ಯಾಟರ್​ಗಳಾದ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಭಾನುವಾರದಿಂದ ನಡೆಯಲಿರುವ ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ. ಪ್ರಸಕ್ತ ಏಕ ಪ್ರಕಾರದ ಸಕ್ರಿಯ ಕ್ರಿಕೆಟಿಗರಾಗಿರುವ ಅವರಿಬ್ಬರು, ಫೆಬ್ರವರಿ-ಮಾರ್ಚ್​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಬಳಿಕ ಮೊದಲ ಬಾರಿಗೆ ಟೀಮ್​ ಇಂಡಿಯಾ ಪರ ಆಡಲಿದ್ದಾರೆ. 2027ರ ಏಕದಿನ ವಿಶ್ವಕಪ್​ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ರೇಸ್​ನಲ್ಲಿ ಉಳಿದುಕೊಳ್ಳುವ ನಿಟ್ಟಿನಲ್ಲಿ ಅವರಿಬ್ಬರಿಗೂ ಇದು ಮಹತ್ವದ ಸರಣಿ ಎನಿಸಿದೆ. ಜತೆಗೆ ಆಸ್ಟ್ರೆಲಿಯಾ ನೆಲದಲ್ಲಿ ಕೆಲ ವಿಶೇಷ ದಾಖಲೆಗಳನ್ನು ಬರೆಯುವ ಅವಕಾಶವೂ ಅವರಿಬ್ಬರ ಮುಂದಿದೆ. ಅಂಥ ಕೆಲ ನಿರೀಕ್ಷಿತ ದಾಖಲೆಗಳ ಸಂಪ್ತ ವಿವರ ಇಲ್ಲಿದೆ...

500ನೇ ಪಂದ್ಯ

ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯ ರೋಹಿತ್​ ಶರ್ಮಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 500ನೇ ಪಂದ್ಯವಾಗಿರಲಿದೆ. ಅವರು ಈ ಮೈಲಿಗಲ್ಲು ನೆಟ್ಟ ವಿಶ್ವದ 11ನೇ ಮತ್ತು ಭಾರತದ 5ನೇ ಆಟಗಾರ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ (664), ವಿರಾಟ್​ ಕೊಹ್ಲಿ (550), ಎಂಎಸ್​ ಧೋನಿ (538), ರಾಹುಲ್​ ದ್ರಾವಿಡ್​ (509) ಹಿಂದಿನ ಭಾರತೀಯ ಸಾಧಕರು. ರೋಹಿತ್​ ಇದುವರೆಗೆ 67 ಟೆಸ್ಟ್​, 159 ಟಿ20 ಮತ್ತು 273 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಸಚಿನ್​ ಸಾಧನೆಯತ್ತ ಚಿತ್ತ

ಏಕದಿನ ಕ್ರಿಕೆಟ್​ನಲ್ಲಿ ಆಸ್ಟ್ರೆಲಿಯಾ ವಿರುದ್ಧ ಸರ್ವಾಧಿಕ 9 ಶತಕ ಸಿಡಿಸಿದ ಹೆಗ್ಗಳಿಕೆ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರದಾಗಿದೆ. ಆಸೀಸ್​ ವಿರುದ್ಧ ಇದುವರೆಗೆ ತಲಾ 8 ಶತಕ ಸಿಡಿಸಿರುವ ಕೊಹ್ಲಿ ಮತ್ತು ರೋಹಿತ್​ಗೆ ಈ ಬಾರಿ ಅದನ್ನು ಸರಿಗಟ್ಟುವ ಅಥವಾ ಮುರಿಯುವ ಅವಕಾಶವಿದೆ. ಇದಕ್ಕಾಗಿ ಅವರು ಸರಣಿಯಲ್ಲಿ 1 ಅಥವಾ 2 ಶತಕ ಸಿಡಿಸಬೇಕಾಗಿದೆ.

ಸಿಕ್ಸರ್​ ಧಮಾಕಾ

ರೋಹಿತ್​ ಶರ್ಮ ಇದುವರೆಗೆ 344 ಸಿಕ್ಸರ್​ ಸಿಡಿಸಿದ್ದು, ಸರಣಿಯಲ್ಲಿ 8 ಸಿಕ್ಸರ್​ ಸಿಡಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ ಸರ್ವಾಧಿಕ ಸಿಕ್ಸರ್​ ಸಿಡಿಸಿದ ದಾಖಲೆ ಬರೆಯಲಿದ್ದಾರೆ. ಪಾಕಿಸ್ತಾನದ ಶಾಹಿದ್​ ಅಫ್ರಿದಿ (351) ಸದ್ಯ ಈ ಗೌರವ ಹೊಂದಿದ್ದಾರೆ. ರೋಹಿತ್​ ಇನ್ನು 6 ಸಿಕ್ಸರ್​ ಸಿಡಿಸಿದರೆ ಏಕದಿನದಲ್ಲಿ 350 ಸಿಕ್ಸರ್​ ಸಿಡಿಸಿದ ಎರಡನೇ ಬ್ಯಾಟರ್​ ಎನಿಸಲಿದ್ದಾರೆ. ರೋಹಿತ್​ ಪ್ರವಾಸದಲ್ಲಿ 12 ಸಿಕ್ಸರ್​ ಸಿಡಿಸಿದರೆ ಆಸೀಸ್​ ಎದುರು ಏಕದಿನದಲ್ಲಿ 100 ಸಿಕ್ಸರ್​ ಸಿಡಿಸಿದ ಸಾಧನೆ ಮಾಡಲಿದ್ದಾರೆ. ಜತೆಗೆ ಒಂದೇ ದೇಶದ ವಿರುದ್ಧ 100 ಸಿಕ್ಸರ್​ ಸಿಡಿಸಿದ ಮೊದಲಿಗ ಎನಿಸಲಿದ್ದಾರೆ.

50 ಶತಕಗಳ ಮೈಲಿಗಲ್ಲು

ರೋಹಿತ್​ ಶರ್ಮ ಇನ್ನೊಂದು ಶತಕ ಸಿಡಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 50 ಶತಕ ಸಿಡಿಸಿದ ವಿಶ್ವದ 10ನೇ ಮತ್ತು ಭಾರತದ 3ನೇ ಬ್ಯಾಟರ್​ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ (100) ಮತ್ತು ವಿರಾಟ್​ ಕೊಹ್ಲಿ (82) ಮೊದಲೆರಡು ಸ್ಥಾನದಲ್ಲಿರುವ ಭಾರತೀಯರಾಗಿದ್ದಾರೆ. ರೋಹಿತ್​ ಇದುವರೆಗೆ ಟೆಸ್ಟ್​ನಲ್ಲಿ 12, ಟಿ20ಯಲ್ಲಿ 5 ಮತ್ತು ಏಕದಿನದಲ್ಲಿ 32 ಶತಕ ಸಿಡಿಸಿದ್ದಾರೆ.

20 ಸಾವಿರ ರನ್​

ರೋಹಿತ್​ ಪ್ರವಾಸದಲ್ಲಿ 300 ರನ್​ ಗಳಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಪೂರೈಸಿದ ವಿಶ್ವದ 14ನೇ ಮತ್ತು ಭಾರತದ 4ನೇ ಬ್ಯಾಟರ್​ ಎನಿಸಲಿದ್ದಾರೆ. ಸಚಿನ್​ ತೆಂಡುಲ್ಕರ್​ (34,357), ವಿರಾಟ್​ ಕೊಹ್ಲಿ (27,599), ರಾಹುಲ್​ ದ್ರಾವಿಡ್​ (24,208) ಮೊದಲ ಮೂವರು ಭಾರತೀಯರು. ರೋಹಿತ್​ ಇದುವರೆಗೆ ಟೆಸ್ಟ್​ನಲ್ಲಿ 4,301, ಟಿ20ಯಲ್ಲಿ 4,231 ಮತ್ತು ಏಕದಿನದಲ್ಲಿ 11,168 ರನ್​ ಸಿಡಿಸಿದ್ದಾರೆ. ರೋಹಿತ್​ (11,168) ಇನ್ನು 196 ರನ್​ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ರನ್​ ಗಳಿಸಿದ ಭಾರತೀಯ ಬ್ಯಾಟರ್​ಗಳಲ್ಲಿ ಸೌರವ್​ ಗಂಗೂಲಿ (11,363) ಅವರನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಲಿದ್ದಾರೆ. ತೆಂಡುಲ್ಕರ್​ (18,426), ಕೊಹ್ಲಿ (14,181) ಮೊದಲೆರಡು ಸ್ಥಾನದಲ್ಲಿದ್ದಾರೆ.

ಕ್ಯಾಚ್​ ಸಾಧನೆ

ರೋಹಿತ್​ ಶರ್ಮ ಸರಣಿಯಲ್ಲಿ 3 ಕ್ಯಾಚ್​ ಹಿಡಿದರೆ ಏಕದಿನ ಕ್ರಿಕೆಟ್​ನಲ್ಲಿ 100 ಕ್ಯಾಚ್​ ಹಿಡಿದ 7ನೇ ಭಾರತೀಯ ಎಂಬ ಸಾಧನೆ ಮಾಡಲಿದ್ದಾರೆ. ವಿರಾಟ್​ ಕೊಹ್ಲಿ (161), ಮೊಹಮದ್​ ಅಜರುದ್ದೀನ್​ (156), ತೆಂಡುಲ್ಕರ್​ (142), ರಾಹುಲ್​ ದ್ರಾವಿಡ್​ (124), ಸುರೇಶ್​ ರೈನಾ (102), ಗಂಗೂಲಿ (100) ಹಿಂದಿನ ಭಾರತೀಯ ಸಾಧಕರು.

ಆಸೀಸ್​ ನೆಲದ ದಾಖಲೆ

ರೋಹಿತ್​ ಇನ್ನು 10 ರನ್​ ಗಳಿಸಿದರೆ, ಆಸ್ಟ್ರೆಲಿಯಾ ನೆಲದಲ್ಲಿ ಆಸೀಸ್​ ವಿರುದ್ಧವೇ ಆಡಿದ ಏಕದಿನ ಪಂದ್ಯಗಳಲ್ಲಿ ಒಂದು ಸಾವಿರ ರನ್​ ಗಳಿಸಿದ ಮೊದಲ ಭಾರತೀಯ ಬ್ಯಾಟರ್​ ಎನಿಸಲಿದ್ದಾರೆ. ಪ್ರಸಕ್ತ ರೋಹಿತ್​ 990 ರನ್​ ಗಳಿಸಿದ್ದಾರೆ. ಕೊಹ್ಲಿ 802 ರನ್​ ಗಳಿಸಿದ್ದು, 198 ರನ್​ ಗಳಿಸಿದರೆ ಅವರಿಗೂ ಈ ಸಾಧನೆ ಅವಕಾಶವಿದೆ.

ಗರಿಷ್ಠ ಶತಕವೀರ

ವಿರಾಟ್​ ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 52 ಶತಕ ಗಳಿಸಿದಂತಾಗುತ್ತದೆ. ಈ ಮೂಲಕ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ಪ್ರಕಾರದಲ್ಲಿ ಗರಿಷ್ಠ ಶತಕ ಸಿಡಿಸಿದ ಬ್ಯಾಟರ್​ ಎನಿಸಲಿದ್ದಾರೆ. ಸದ್ಯ ಸಚಿನ್​ ತೆಂಡುಲ್ಕರ್​ ಟೆಸ್ಟ್​ನಲ್ಲಿ 51 ಶತಕ ಸಿಡಿಸಿದ್ದು, ಕೊಹ್ಲಿ ಜತೆ ಗೌರವ ಹಂಚಿಕೊಂಡಿದ್ದಾರೆ.

ರನ್​ ರೆಕಾರ್ಡ್​

ವಿರಾಟ್​ ಕೊಹ್ಲಿ (14,181) ಇನ್ನು 54 ರನ್​ ಗಳಿಸಿದರೆ, ಶ್ರೀಲಂಕಾದ ಕುಮಾರ ಸಂಗಕ್ಕರರನ್ನು (14,234) ಹಿಂದಿಕ್ಕಿ ಏಕದಿನ ಕ್ರಿಕೆಟ್​ನಲ್ಲಿ 2ನೇ ಗರಿಷ್ಠ ರನ್​ ಸಿಡಿಸಿದ ಸಾಧನೆ ಮಾಡಲಿದ್ದಾರೆ. ಕೊಹ್ಲಿ ಇನ್ನೊಂದು ಶತಕ ಸಿಡಿಸಿದರೆ, ಏಷ್ಯಾದಿಂದ ಹೊರಗೆ 30 ಅಂತಾರಾಷ್ಟ್ರೀಯ ಕ್ರಿಕೆಟ್​ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್​ ಎನಿಸಲಿದ್ದಾರೆ.

ಗೆಲುವಿನ ರನ್​

ಕೊಹ್ಲಿ ಚೇಸಿಂಗ್​ ವೇಳೆ 2 ರನ್​ ಗಳಿಸಿದರೆ, ಏಕದಿನ ಕ್ರಿಕೆಟ್​ನಲ್ಲಿ ಯಶಸ್ವಿ ಚೇಸಿಂಗ್​ ವೇಳೆ 6 ಸಾವಿರ ರನ್​ ಪೂರೈಸಿದ ವಿಶ್ವದ ಮೊದಲ ಆಟಗಾರ ಎನಿಸಲಿದ್ದಾರೆ. ರೋಹಿತ್​ ಭಾರತದ ಗೆಲುವಿನ ವೇಳೆ 30 ರನ್​ ಗಳಿಸಿದರೆ, ಏಕದಿನದಲ್ಲಿ ಗೆದ್ದ ಪಂದ್ಯದಲ್ಲಿ 8 ಸಾವಿರ ರನ್​ ಗಳಿಸಿ ಸಾಧನೆ ಮಾಡಲಿದ್ದಾರೆ.

ವೈಟ್​ಬಾಲ್​ ಗ್ರೇಟ್​

ವಿರಾಟ್​ ಕೊಹ್ಲಿ ಇನ್ನು 68 ರನ್​ ಗಳಿಸಿದರೆ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಸರ್ವಾಧಿಕ ರನ್​ ಗಳಿಸಿದ ಬ್ಯಾಟರ್​ ಎನಿಸಲಿದ್ದಾರೆ. ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಒಟ್ಟಾರೆ 18,436 ರನ್​ (ಏಕದಿನದಲ್ಲಿ 18,426, ಟಿ20ಯಲ್ಲಿ 10) ಗಳಿಸಿರುವ ಸಚಿನ್​ ತೆಂಡುಲ್ಕರ್​ ಸದ್ಯ ಈ ದಾಖಲೆ ಹೊಂದಿದ್ದಾರೆ. ಕೊಹ್ಲಿ ಪ್ರಸಕ್ತ ಒಟ್ಟು 18,369 ರನ್​ (ಏಕದಿನದಲ್ಲಿ 14,181, ಟಿ20ಯಲ್ಲಿ 4,188) ಗಳಿಸಿ 2ನೇ ಸ್ಥಾನದಲ್ಲಿದ್ದಾರೆ.

ಆರಂಭಿಕನಾಗಿ ನಂ. 1

ರೋಹಿತ್​ ಇನ್ನು 174 ರನ್​ ಗಳಿಸಿದರೆ, ಭಾರತ ಪರ ಆರಂಭಿಕನಾಗಿ ಗರಿಷ್ಠ ರನ್​ ಗಳಿಸಿದ ಬ್ಯಾಟರ್​ ಎನಿಸಲಿದ್ದಾರೆ. ಪ್ರಸಕ್ತ ವೀರೇಂದ್ರ ಸೆಹ್ವಾಗ್​ (15,758) ಈ ದಾಖಲೆ ಹೊಂದಿದ್ದಾರೆ. ರೋಹಿತ್​ ಶರ್ಮ 349 ಪಂದ್ಯಗಳಲ್ಲಿ 15,585 ರನ್​ ಗಳಿಸಿ ನಂತರದಲ್ಲಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಸಚಿನ್​ ತೆಂಡುಲ್ಕರ್​ರನ್ನು (15,335) ರೋಹಿತ್​ ಹಿಂದಿಕ್ಕಿದ್ದರು.