ಬೆಂಗಳೂರು: ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಟಿ20 ಕ್ರಿಕೆಟ್ ಭವಿಷ್ಯದ ಬಗೆಗಿನ ಗೊಂದಲಗಳಿಗೆ ಭಾನುವಾರ ಬಹುತೇಕ ತೆರೆಬಿದ್ದಿದೆ. ಅಫ್ಘಾನಿಸ್ತಾನ ವಿರುದ್ಧದ ತವರಿನ ಟಿ20 ಸರಣಿಗೆ ಇಬ್ಬರೂ ಭಾರತ ತಂಡದಲ್ಲಿ ಸ್ಥಾನ ಪಡೆಯುವುದರೊಂದಿಗೆ, ಜೂನ್ನಲ್ಲಿ ಟಿ20 ವಿಶ್ವಕಪ್ನಲ್ಲೂ ಆಡುವ ಸ್ಪಷ್ಟ ಸೂಚನೆ ರವಾನೆಯಾಗಿದೆ. ಜ. 11ರಿಂದ ನಡೆಯಲಿರುವ 3 ಪಂದ್ಯಗಳ ಸರಣಿಗೆ ರೋಹಿತ್ ನಾಯಕರೂ ಆಗಿದ್ದು, ಟಿ20 ವಿಶ್ವಕಪ್ನಲ್ಲೂ ಅವರೇ ತಂಡವನ್ನು ಮುನ್ನಡೆಸುವುದು ಬಹುತೇಕ ಖಾತ್ರಿಯಾಗಿದೆ. ರೋಹಿತ್-ಕೊಹ್ಲಿ 14 ತಿಂಗಳ ಬಳಿಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕೆಎಲ್ ರಾಹುಲ್ ಜತೆಗೆ ಇಶಾನ್ ಕಿಶನ್ರನ್ನು ವಿಕೆಟ್ ಕೀಪರ್ ಸ್ಥಾನಕ್ಕೆ ಕಡೆಗಣಿಸಲಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮ ತಂಡದಲ್ಲಿರುವ ಇಬ್ಬರು ವಿಕೆಟ್ ಕೀಪರ್ಗಳಾಗಿದ್ದಾರೆ. ಇತ್ತೀಚೆಗೆ ಆಸೀಸ್, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ತಪ್ಪಿಸಿಕೊಂಡಿದ್ದ ಸ್ಯಾಮ್ಸನ್ಗೆ ಮತ್ತೆ ಅವಕಾಶ ಲಭಿಸಿದಂತಾಗಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್ಗೆ ಟಿ20 ತಂಡದಿಂದ ವಿಶ್ರಾಂತಿ ನೀಡಲಾಗಿದೆ.
ಪಾಂಡ್ಯ, ಸೂರ್ಯ ಅಲಭ್ಯ
ಇತ್ತೀಚೆಗೆ ಟಿ20 ಕ್ರಿಕೆಟ್ನಲ್ಲಿ ಭಾರತವನ್ನು ಮುನ್ನಡೆಸಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವಿಶ್ವ ನಂ. 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಫಿಟ್ನೆಸ್ ಸಮಸ್ಯೆಯಿಂದಾಗಿ ಅಫ್ಘಾನಿಸ್ತಾನ ವಿರುದ್ಧ ಸರಣಿಗೆ ಅಲಭ್ಯರಾಗಿದ್ದಾರೆ. ಋತುರಾಜ್ ಗಾಯಕ್ವಾಡ್ ಕೂಡ ಫಿಟ್ನೆಸ್ ಕೊರತೆಯಿಂದಾಗಿ ಸ್ಥಾನ ಪಡೆದಿಲ್ಲ.
ಟಿ20 ವಿಶ್ವಕಪ್ಗೂ ರೋಹಿತ್ ನಾಯಕ?
ಆಫ್ಘನ್ ವಿರುದ್ಧ ಸರಣಿಗೆ ನಾಯಕರಾಗಿ ಮರಳುವುದರೊಂದಿಗೆ ರೋಹಿತ್ ಶರ್ಮ ಟಿ20 ವಿಶ್ವಕಪ್ನಲ್ಲೂ ಭಾರತವನ್ನು ಮುನ್ನಡೆಸುವ ಸುಳಿವು ಲಭಿಸಿದೆ. ಇದರಿಂದ, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ರೋಹಿತ್, ಹಾರ್ದಿಕ್ ಪಾಂಡ್ಯ ನಾಯಕತ್ವದಡಿಯಲ್ಲಿ ಆಡಿದರೂ, ಟಿ20 ವಿಶ್ವಕಪ್ನಲ್ಲಿ ಪಾಂಡ್ಯ, ರೋಹಿತ್ ನಾಯಕತ್ವದಲ್ಲಿ ಆಡಬೇಕಾಗುತ್ತದೆ. ಗುಜರಾತ್ ಟೈಟಾನ್ಸ್ ಪರ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಪಾಂಡ್ಯ ಭಾರತ ಟಿ20 ತಂಡಕ್ಕೂ ಹಂಗಾಮಿ ನಾಯಕರೆನಿಸಿದ್ದರು.
ಕೆಎಲ್ ರಾಹುಲ್ಗೆ ನಿರಾಸೆ
ರೋಹಿತ್-ಕೊಹ್ಲಿ ಅವರಂತೆ ಕನ್ನಡಿಗ ಕೆಎಲ್ ರಾಹುಲ್ ಕೂಡ 2022ರ ವಿಶ್ವಕಪ್ ಬಳಿಕ ಭಾರತ ಪರ ಟಿ20 ಪಂದ್ಯ ಆಡಿಲ್ಲ. ವಿಶ್ವಕಪ್ನಲ್ಲಿ ಆರಂಭಿಕರಾಗಿ ಪವರ್ಪ್ಲೇನಲ್ಲಿ ಅವರ ಕಳಪೆ ಸ್ಟ್ರೈಕ್ರೇಟ್ ಟೀಕೆಗೆ ಗುರಿಯಾಗಿತ್ತು. ಈಗ ಆ್ಘನ್ ಸರಣಿಗೆ ಸ್ಥಾನ ಪಡೆಯದಿರುವ ರಾಹುಲ್, ಟಿ20 ವಿಶ್ವಕಪ್ಗೆ ಮರಳುವ ಬಗ್ಗೆ ಅನುಮಾನ ಮೂಡಿದೆ. ಆದರೆ ಐಪಿಎಲ್ನಲ್ಲಿ ಮಿಂಚಿದರೆ ಮತ್ತು ರಿಷಭ್ ಪಂತ್ ಫಿಟ್ ಆಗದಿದ್ದರೆ, ಏಕದಿನ-ಟೆಸ್ಟ್ ಬಳಿಕ ಟಿ20ಯಲ್ಲೂ ರಾಹುಲ್ ವಿಕೆಟ್ ಕೀಪರ್-ಬ್ಯಾಟರ್ ಆಗಿ ಸ್ಥಾನ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಭಾರತ ಟಿ20 ತಂಡ: ರೋಹಿತ್ ಶರ್ಮ (ನಾಯಕ), ವಿರಾಟ್ ಕೊಹ್ಲಿ, ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಆವೇಶ್ ಖಾನ್, ಮುಕೇಶ್ ಕುಮಾರ್.
3 ಪಂದ್ಯಗಳ ವೇಳಾಪಟ್ಟಿ: ಜ. 11: ಮೊಹಾಲಿ, ಜ. 14: ಇಂದೋರ್, ಜ. 17: ಬೆಂಗಳೂರು; ಆರಂಭ: ರಾತ್ರಿ 7.00; ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ.