ಕ್ರೀಡೆ

ಆತ ರೋಹಿತ್​ನ ಚೇಲಾ; ಟೀಮ್​ ಇಂಡಿಯಾ​ ಆಟಗಾರನ​ ಕುರಿತು ಮಾಜಿ ನಾಯಕನ ಹೇಳಿಕೆ ವೈರಲ್​

ನವದೆಹಲಿ: ಜುಲೈ 27ರಂದು ಶ್ರೀಲಂಕಾ ವಿರುದ್ಧ ಆರಂಭಗೊಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಕ್ಲೀನ್​ಸ್ವೀಪ್​ ಸಾಧಿಸಿದ್ದು, ನೂತನ ನಾಯಕ ಸೂರ್ಯಕುಮಾರ್​ ಕ್ಯಾಪ್ಟನ್ಸಿಯನ್ನು ಹಲವರು ಪ್ರಶಂಶಿಸಿದ್ದಾರೆ. ಆತಿಥೇಯ ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ನಾಯಕತ್ವ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಮಾಜಿ ನಾಯಕ ಮೊಹಮ್ಮದ್​ ಕೈಫ್​ ಸೂರ್ಯಕುಮಾರ್​ ಯಾದವ್​ರನ್ನು ರೋಹಿತ್​ ಚೇಲಾ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಈ ಕುರಿತು ಬರೆದುಕೊಂಡಿರುವ ಮೊಹಮ್ಮದ್​ ಕೈಫ್​, ಸೂರ್ಯಕುಮಾರ್​ ಯಾದವ್​ ರೋಹಿತ್​ ಶರ್ಮರ ಚೇಲಾ ಎಂದರೆ ಯಾವುದೇ ತಪ್ಪಿಲ್ಲ. ಏಕೆಂದರೆ 19 ನೇ ಓವರ್​ ರಿಂಕು ಸಿಂಗ್​ರಿಂದ, 20 ಓವರ್​ನಲ್ಲೇ ಆತ ಸ್ವಯಂ ಬೌಲಿಂಗ್​ ಮಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಒಬ್ಬ ಮಹಾನ್​ ನಾಯಕ ಎನ್ನಿಸಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು ಎಂದು ಬರೆದುಕೊಂಡಿದ್ದಾರೆ.

ಇತ್ತ ಮೊಹಮ್ಮದ್​ ಕೈಫ್​ ಅವರ ಟ್ವೀಟ್​ ವೈರಲ್​ ಆಗಿದ್ದು, ಹಲವರು ಸೂರ್ಯಕುಮಾರ್​ ಯಾದವ್​ ಅವರ ನಾಯಕತ್ವ ಹಾಗೂ ಕೈಫ್​ ಅವರು ಅದನ್ನು ಬಣ್ಣಿಸಿರುವ ರೀತಿಯನ್ನು ಹಾಡಿಹೊಗಳುತ್ತಿದ್ದಾರೆ. ರೋಹಿತ್​ ಶರ್ಮಾ ನಿವೃತ್ತರಾದ ಬಳಿಕ ಸೂರ್ಯಕುಮಾರ್​ ಯಾದವ್​ ಅವರನ್ನೇ ಏಕದಿನ ಹಾಗೂ ಟೆಸ್ಟ್​ ಮಾದರಿಗೆ ನಾಯಕನನ್ನಾಗಿ ಮಾಡಿ. ತಂಡದ ಭವಿಷ್ಯದ ನಿಟ್ಟಿನಲ್ಲಿ ಬಿಸಿಸಿಐ ಸೂರ್ಯ ಅವರಿಗೆ ಹೆಚ್ಚಿನ ಮಣೆ ಹಾಕುವುದು ಸೂಕ್ತ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.