ಕ್ರೀಡೆ

ದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷರಾಗಿ ಪುನರಾಯ್ಕೆಗೆ ರೋಹನ್​ ಜೇಟ್ಲಿ ಸ್ಪರ್ಧೆ; ಬಿಸಿಸಿಐ ಕಾರ್ಯದರ್ಶಿಯಾಗುವ ಸಾಧ್ಯತೆ ಕ್ಷೀಣ!

ನವದೆಹಲಿ: ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ ಅವರ ಪುತ್ರ ರೋಹನ್​ ಜೇಟ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್​ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿ ಪುನರಾಯ್ಕೆಯಾಗಲು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಅವರು 2ನೇ ಅವಧಿಗೆ ಡಿಡಿಸಿಎಯಲ್ಲೇ ಮುಂದುವರಿಯುವ ನಿರೀಕ್ಷೆ ಅಧಿಕವಾಗಿದ್ದು, ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್​ ಷಾ ಉತ್ತರಾಧಿಕಾರಿ ಆಗುವ ಸಾಧ್ಯತೆ ಕ್ಷೀಣಿಸಿದೆ.

ಡಿಡಿಸಿಎ ಚುನಾವಣೆ ಡಿಸೆಂಬರ್​ 13-15ರ ನಡುವೆ ನಡೆಯಲಿದ್ದು, ಡಿಸೆಂಬರ್​ 16ರಂದು ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಬಿಸಿಸಿಐ ಹಾಲಿ ಕಾರ್ಯದರ್ಶಿ ಜಯ್​ ಷಾ ಡಿಸೆಂಬರ್​ 1ರಂದು ಐಸಿಸಿ ಚೇರ್ಮನ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅವರಿಂದ ತೆರವಾಗಲಿರುವ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರೋಹನ್​ ಜೇಟ್ಲಿ ನೆಚ್ಚಿನ ಅಭ್ಯರ್ಥಿ ಎನಿಸಿದ್ದರು. ಆದರೆ ಈಗ ಡಿಡಿಸಿಎಯಲ್ಲೇ ಪುನರಾಯ್ಕೆಗೆ ರೋಹನ್​ ಒಲವು ತೋರಿರುವುದರಿಂದ ಬಿಸಿಸಿಐನತ್ತ ಹೋಗುವ ಆಸೆ ಕೈಬಿಟ್ಟಂತಾಗಿದೆ.

ಡಿಡಿಸಿಎ ಅಧ್ಯಕ್ಷ ಹುದ್ದೆಗೆ ರೋಹನ್​ ಜೇಟ್ಲಿಗೆ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಕೀರ್ತಿ ಆಜಾದ್​ ಪ್ರತಿಸ್ಪರ್ಧೆ ಒಡ್ಡಲಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ರೋಹನ್​ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೂಲಕ ಕೀರ್ತಿ ಆಜಾದ್​ ಡಿಡಿಸಿಎ ಚುನಾವಣೆಯ ಕಾವು ಏರಿಸಿದ್ದಾರೆ.