ಕ್ರೀಡೆ

ಇಂಡಿಯಾ ಲೆಜೆಂಡ್ಸ್​ಗೆ ಜಯ: ಇರ್ಫಾನ್ ಪಠಾಣ್ ಸ್ಪೋಟಕ ಬ್ಯಾಟಿಂಗ್, ಲಂಕಾ ವಿರುದ್ಧ 5 ವಿಕೆಟ್ ಗೆಲುವು

ಮುಂಬೈ: ಇರ್ಫಾನ್ ಪಠಾಣ್ (57* ರನ್, 31 ಎಸೆತ, 6 ಬೌಂಡರಿ, 3 ಸಿಕ್ಸರ್) ಸ್ಪೋಟಕ ಅರ್ಧಶತಕದ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಟಿ20 ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 5 ವಿಕೆಟ್​ಗಳಿಂದ ಮಣಿಸಿದೆ.

ಡಿವೈ ಪಾಟೀಲ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್​ನ ನಾಯಕ ಸಚಿನ್ ತೆಂಡುಲ್ಕರ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲ ವಿಕೆಟ್​ಗೆ ಶ್ರೀಲಂಕಾ ಲೆಜೆಂಡ್ಸ್ ಉತ್ತಮ ಆರಂಭ ಪಡೆದರೂ, ನಂತರದ ಓವರ್​ಗಳಲ್ಲಿ ಕುಸಿತ ಕಂಡಿದ್ದರಿಂದ 8 ವಿಕೆಟ್​ಗೆ 138 ರನ್ ಪೇರಿಸಲಷ್ಟೇ ಯಶ ಕಂಡಿತು. ಪ್ರತಿಯಾಗಿ ಭಾರತ ತಂಡ 18.4 ಓವರ್​ಗಳಲ್ಲಿ 5 ವಿಕೆಟ್​ಗೆ 139 ರನ್ ಬಾರಿಸಿ ಗೆಲುವು ಕಂಡಿತು.

19 ರನ್ ಗಳಿಸುವ ವೇಳೆಗೆ ಸಚಿನ್ ತೆಂಡುಲ್ಕರ್ (0), ವೀರೇಂದ್ರ ಸೆಹ್ವಾಗ್ (3) ಹಾಗೂ ಯುವರಾಜ್ ಸಿಂಗ್ (1) ವಿಕೆಟ್ ಕಳೆದುಕೊಂಡು ಭಾರತ ಸೋಲಿನ ಹಾದಿಯಲ್ಲಿತ್ತು. 4ನೇ ವಿಕೆಟ್​ಗೆ ಮೊಹಮದ್ ಕೈಫ್ (46ರನ್, 45 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಸಂಜಯ್ ಬಂಗಾರ್ (18) 43 ರನ್ ಜತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರು. ತಂಡದ ಮೊತ್ತ 81 ರನ್ ಆಗುವ ವೇಳೆಗೆ ಬಂಗಾರ್ ಹಾಗೂ ಕೈಫ್ ಡಗ್​ಔಟ್ ಸೇರಿದ್ದರು. ಈ ವೇಳೆ ಜತೆಯಾದ ಇರ್ಫಾನ್ ಪಠಾಣ್ ಹಾಗೂ ಮನ್​ಪ್ರೀತ್ ಗೋನಿ 24 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪರವಾಗಿ ದೊಡ್ಡ ಇನಿಂಗ್ಸ್ ಯಾರಿಂದಲೂ ಬರಲಿಲ್ಲ. ಲಂಕಾ ಮಾಜಿ ನಾಯಕ ಮರ್ವನ್ ಅಟ್ಟಪಟ್ಟು 5 ಎಸೆತಗಳಲ್ಲಿ 1 ರನ್ ಬಾರಿಸಿ ಔಟಾದರೆ, ತಿಲಾನ್ ತುಷಾರ ಆಟ ಹೆಚ್ಚಿನ ಗಮನಸೆಳೆಯಲಿಲ್ಲ.

ಚಾಮರ ಕಪುಗೆಡರ (23ರನ್, 17 ಎಸೆತ, 3 ಬೌಂಡರಿ) ಹಾಗೂ ಸಚಿತ್ರ ಸೇನನಾಯಕೆ (19ರನ್, 15 ಎಸೆತ, 3 ಬೌಂಡರಿ) ವೇಗವಾಗಿ ಕೆಲ ರನ್​ಗಳಿಸಿದ್ದರಿಂದ 16ನೇ ಓವರ್ ವೇಳೆಗೆ ಶ್ರೀಲಂಕಾ ಲೆಜೆಂಡ್ಸ್ 100ರ ಗಡಿ ದಾಟಿತು. ಕೊನೆಯಲ್ಲಿ ಅಜಂತಾ ಮೆಂಡಿಸ್ (9) ಹಾಗೂ ರಂಗನಾ ಹೆರಾತ್ (12) ವೇಗವಾಗಿ ರನ್ ಗಳಿಸಿ ತಂಡದ ಮೊತ್ತವನ್ನು 135ರ ಗಡಿ ದಾಟಿಸಿದರು

ಮೊಹಮದ್ ಕೈಫ್ ಸೂಪರ್ ಫೀಲ್ಡಿಂಗ್

ಆಡುವ ದಿನಗಳಲ್ಲಿ ಬ್ಯಾಟಿಂಗ್​ಗಿಂತ ಹೆಚ್ಚಾಗಿ ಫೀಲ್ಡಿಂಗ್ ಮೂಲಕವೇ ಗಮನಸೆಳೆಯುತ್ತಿದ್ದ ಮೊಹಮದ್ ಕೈಫ್, ಪಂದ್ಯದಲ್ಲೂ ಆಕರ್ಷಕ ಕ್ಯಾಚ್​ಗಳ ಮೂಲಕ ಮಿಂಚಿದರು. ತಿಲಕರತ್ನೆ ದಿಲ್ಶಾನ್ ಹಾಗೂ ಚಾಮರ ಕಪುಗೆಡರ ವಿಕೆಟ್ ಪತನದಲ್ಲಿ ಕೈಫ್​ರ ಪಾತ್ರವೇ ಬಹಳ ಪ್ರಮುಖವಾಗಿತ್ತು. ಕೈಫ್ ಮಾತ್ರವಲ್ಲದೆ, ಮನ್​ಪ್ರೀತ್ ಗೋನಿ ಕೂಡ ಉಪುಲ್ ಚಂದನಾ ಕ್ಯಾಚ್​ಅನ್ನು ಡೀಪ್ ಮಿಡ್​ವಿಕೆಟ್ ಬೌಂಡರಿಯಲ್ಲಿ ಬಹಳ ಆಕರ್ಷಕವಾಗಿ ಪಡೆದರು.

ಇಂಡಿಯಾ ಲೆಜೆಂಡ್ಸ್​ನಲ್ಲಿ ಬದಲಾವಣೆ

ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆದ್ದ ತಂಡದಿಂದ ಏಕೈಕ ಬದಲಾವಣೆಯನ್ನು ಇಂಡಿಯಾ ಲೆಜೆಂಡ್ಸ್ ಮಾಡಿತು. ಸಾಯಿರಾಜ್ ಬಹುತುಳೆ ಬದಲಾಗಿ, ಟೀಮ್ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್​ರನ್ನು ಆಡಿಸಿತು. ಇನ್ನು ಶ್ರೀಲಂಕಾ ತಂಡ ಗಾಯಾಳು ಮುತ್ತಯ್ಯ ಮುರಳೀಧರನ್ ಬದಲಿಗೆ ತಿಲಾನ್ ತುಷಾರರನ್ನು ಆಡಿಸಿತು. ಮೊದಲ ಪಂದ್ಯದಂತೆ ಈ ಪಂದ್ಯಕ್ಕೂ ಅಭಿಮಾನಿಗಳ ವಲಯದಿಂದ ಭಾರಿ ಬೆಂಬಲ ವ್ಯಕ್ತವಾಗಿದ್ದರಿಂದ ಕ್ರೀಡಾಂಗಣ ಬಹುತೇಕ ಫುಲ್ ಹೌಸ್ ಆಗಿತ್ತು.