ಕ್ರೀಡೆ

ಟಿ10 ಲೀಗ್​ನಲ್ಲಿ ತಂಡ ಖರೀದಿಸಿದ ಚಾಹಲ್​ ಗೆಳತಿ: ಆಸ್ಟ್ರೆಲಿಯಾದ ಮಾಜಿ ಕ್ರಿಕೆಟಿಗ ನಾಯಕ

ನವದೆಹಲಿ: ಭಾರತ ತಂಡದ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಗೆಳತಿ ಹಾಗೂ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಅರ್​ಜೆ ಮಹ್ವಾಶ್​, ಚೊಚ್ಚಲ ಆವೃತ್ತಿಯ ಕ್ರಿಕೆಟ್​ ಲೀಗ್​ ಟಿ10 (ಸಿಎಲ್​ಟಿ10) ಟೂರ್ನಿಯಲ್ಲಿ ಸುಪ್ರೀಂ ಸ್ಟ್ರೆಕರ್ಸ್​ ತಂಡದ ಒಡೆತನ ಪಡೆದುಕೊಂಡಿದ್ದಾರೆ. 3 ದಿನಗಳ ಟೆನಿಸ್​ಬಾಲ್​ ಕ್ರಿಕೆಟ್​ ಟೂರ್ನಿ ಆಗಸ್ಟ್​ 22ರಿಂದ 24ರವರೆಗೆ ನೋಯ್ಡಾದಲ್ಲಿ ನಡೆಯಲಿದೆ.

ನವದೆಹಲಿಯಲ್ಲಿ ನಡೆದ ಹರಾಜಿನಲ್ಲಿ ತಂಡದ ಒಡೆತನ ಪಡೆದಿರುವ ಮಹ್ವಾಶ್​, ಆಸ್ಟ್ರೆಲಿಯಾದ ಮಾಜಿ ಕ್ರಿಕೆಟಿಗ ಶಾನ್​ ಮಾರ್ಷ್​ರನ್ನು ತನ್ನ ತಂಡದ ನಾಯಕರನ್ನಾಗಿ ನೇಮಿಸಿದ್ದಾರೆ. ನಟಿ ಸನ್ನಿ ಲಿಯೋನ್​ ಮತ್ತು ರೂಪದರ್ಶಿ ಪ್ರಿನ್​ ನರುಲಾ ಕೂಡ ಟೂರ್ನಿಯ ವಿವಿಧ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ. ಚಾಂಪಿಯನ್ಸ್​ ಟ್ರೋಫಿಯ ವೇಳೆ ಚಾಹಲ್​ ಜತೆಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದ ಮಹ್ವಾಶ್​, ನಂತರ ಐಪಿಎಲ್​ ಸಮಯದಲ್ಲೂ ಚಾಹಲ್​ ಆಡುತ್ತಿದ್ದ ಪಂಜಾಬ್​ ಕಿಂಗ್ಸ್​ ತಂಡದ ಪಂದ್ಯಗಳಿಗೆ ಹಾಜರಾಗಿ ಗಮನಸೆಳೆದಿದ್ದರು. ಇದರಿಂದ ಚಾಹಲ್​&ಮಹ್ವಾಶ್​ ನಡುವಿನ ಡೇಟಿಂಗ್​ ವರದಿಗಳು ಹರಡಿದ್ದವು.