ಕ್ರೀಡೆ

ಅಪಘಾತದಲ್ಲಿ ಪಂತ್​ ಜೀವ ಉಳಿಸಿದ ಯುವಕನಿಂದ ಆತ್ಮಹತ್ಯೆ ಯತ್ನ! ಜೀವನ್ಮರಣ ಹೋರಾಟ, ಪ್ರೇಯಸಿ ಸಾವು | Rishabh Pant

Rishabh Pant : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಷಭ್​ ಪಂತ್ 2022ರ ಡಿಸೆಂಬರ್ 30ರಂದು ಕಾರು ಅಪಘಾತಕ್ಕೆ ಒಳಗಾಗಿದ್ದರು. ಪಂತ್ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಪಂತ್ ಅವರನ್ನು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆ ಇಬ್ಬರು ಯುವಕರಲ್ಲಿ ಒಬ್ಬರಾದ ರಜತ್ ಕುಮಾರ್​ (25) ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ರಜತ್ ತನ್ನ ಗೆಳತಿ ಮನು ಕಶ್ಯಪ್ (21) ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮನುವಿನ ಕುಟುಂಬ ತಮ್ಮ ಪ್ರೀತಿಯನ್ನು ಒಪ್ಪಿಕೊಳ್ಳದ ಕಾರಣ ರಜತ್​ ಅವರು ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ, ರಜತ್​ ಮತ್ತು ಮನು ನಿರ್ಜನ ಪ್ರದೇಶದಲ್ಲಿ ಕೀಟನಾಶಕ ಸೇವಿಸಿದರು. ಬಳಿಕ ಇಬ್ಬರು ಉಸಿರಾಡಲು ಕಷ್ಟಪಡುತ್ತಿದ್ದಾಗ, ದಾರಿಹೋಕರು ಅವರನ್ನು ಗಮನಿಸಿ, ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮನು ಕೊನೆಯುಸಿರೆಳೆದರೆ, ರಜತ್​ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮನು ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ, ಆಕೆಯ ತಾಯಿ ಮುಜಾಫರ್ ನಗರ ಪೊಲೀಸರಿಗೆ (ಉತ್ತರ ಪ್ರದೇಶ) ದೂರು ನೀಡಿದ್ದು, ರಜತ್ ತನ್ನ ಮಗಳಿಗೆ ವಿಷ ಕುಡಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ, ಪ್ರೇಮ ವೈಫಲ್ಯದಿಂದಾಗಿ ಇಬ್ಬರೂ ಸ್ವಯಂಪ್ರೇರಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮನು ಮತ್ತು ರಜತ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಬೇರೆ ಬೇರೆ ಜಾತಿಯವರಾಗಿದ್ದರಿಂದ ಹಿರಿಯರು ಅವರ ಪ್ರೀತಿಯನ್ನು ಸ್ವೀಕರಿಸಲಿಲ್ಲ. ಅಲ್ಲದೆ, ಬೇರೊಬ್ಬರೊಂದಿಗೆ ಮನುವಿಗೆ ಮದುವೆಗೆ ಪ್ಲಾನ್​ ಮಾಡಿದ್ದರು. ಈ ವಿಚಾರ ಗೊತ್ತಾದ ಬಳಿಕ ಮನು ಮತ್ತು ರಜತ್ ಆತ್ಮಹತ್ಯೆಗೆ ಯತ್ನಿಸಿದರು. ದುರಾದೃಷ್ಟವಶಾತ್​ ಇದರಲ್ಲಿ ಮನು ಮೃತಪಟ್ಟಿದ್ದಾಳೆ.

ಅಂದಹಾಗೆ ರಿಷಭ್ ಪಂತ್ ಕಾರು ಅಪಘಾತಕ್ಕೀಡಾದಾಗ ರಜತ್ ಮತ್ತು ಅವರ ಸ್ನೇಹಿತ ನಿಶು ಆಸ್ಪತ್ರೆಗೆ ದಾಖಲಿಸಿದರು. ತನ್ನನ್ನು ರಕ್ಷಣೆ ಮಾಡಿದ್ದಕ್ಕಾಗಿ ಪಂತ್ ಅವರು ರಜತ್ ಮತ್ತು ನಿಶುಗೆ ಸ್ಕೂಟರ್ ಅನ್ನು ಉಡುಗೊರೆಯಾಗಿ ನೀಡಿದರು. ಕಾರು ಅಪಘಾತದಿಂದ ಚೇತರಿಸಿಕೊಂಡ ನಂತರ, ಪಂತ್ ಮತ್ತೆ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪಂತ್ ತಮ್ಮ ಪುನರಾಗಮನದಲ್ಲಿಯೂ ಮೊದಲಿನಂತೆಯೇ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ 2024ರಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ ಪಂತ್, ಕಳೆದ ವರ್ಷ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. (ಏಜೆನ್ಸೀಸ್​)