ಕ್ರೈಸ್ಟ್ಚರ್ಚ್: ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಸ್ಥಳಿಯ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ "ಸ್ಟ್ಯಾನ್ ಸ್ಟ್ಯಾನ್' ಹೆಸರಿನಲ್ಲಿ ಆಡಿ, 21 ಎಸೆತಗಳಲ್ಲಿ 54 ರನ್ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಇದರ ಹಿಂದೆ ಒಂದು ರೋಚಕ ಕಹಾನಿಯೂ ಇದೆ!
ದಿ ಚೂಸನ್ ಒನ್ಸ್ ವಿರುದ್ಧದ ಪಂದ್ಯಕ್ಕೆ ಪಂತ್ ಓಪನ್ ಹೌಸ್ ಸ್ವಿಂಗರ್ಸ್ ತಂಡ ಓರ್ವ ಆಟಗಾರನ ಕೊರತೆ ಹೊಂದಿತ್ತು. ಇದರಿಂದ ತಂಡದ ಆಟಗಾರ ಮೊಹಮ್ಮದ್ ಸಫಿ ತಮ್ಮ ತಂಡದ ಪರ ಆಡಲು ಯಾರಾದರೂ ಸಿಗುವರೇ ಎಂದು ಕೆಸ್ಟ್ಚರ್ಚ್ ನಗರದಲ್ಲಿ ಹುಡುಕಾಡುತ್ತಿದ್ದರು. ಆಗ ಎಲೆಕ್ಟ್ರಿಕ್ ಬೈಕ್ನಲ್ಲಿ ಸುತ್ತಾಡುತ್ತಿದ್ದ ರಿಷಭ್ ಪಂತ್ ಕಣ್ಣಿಗೆ ಬಿದ್ದರು. ಅವರೊಂದಿಗೆ ಫೋಟೋ ತೆಗೆಸಿಕೊಂಡ ಬಳಿಕ ಸಫಿ, ತಮ್ಮ ಪರಿಸ್ಥಿತಿಯನ್ನು ವಿವರಿಸಿ, ತಮ್ಮ ತಂಡದ ಪರ ಆಡುವಂತೆ ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿದ ಪಂತ್, ತಕ್ಷಣವೇ ತನ್ನ ಪರ್ಪಲ್ ಟ್ರ್ಯಾಕ್ಸೂಟ್ನಲ್ಲಿ ಪಂದ್ಯ ಆಡಲು ತೆರಳಿದರು.
ಅಲ್ಲಿ ಎದುರಾಳಿ ತಂಡ ಅವರನ್ನು ಗುರುತಿಸಲಿಲ್ಲ. ಯಾಕೆಂದರೆ ಪಂತ್, ಬೇರೆ ಹೆಸರಿನೊಂದಿಗೆ ಕಣಕ್ಕಿಳಿದಿದ್ದರು. ಬಳಿಕ ಅವರು ಸಿಕ್ಸರ್ಗಳ ಅಬ್ಬರ ತೋರಿಸಲು ಆರಂಭಿಸಿದಾಗಲೇ ಅವರು ಯಾರೆಂದು ಎಲ್ಲರಿಗೂ ತಿಳಿಯಿತು. ಬಳಿಕ, ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನು ಆಡಿಸಿದ್ದಕ್ಕೆ ಎದುರಾಳಿ ತಂಡ ಆಕ್ಷೇಪವನ್ನು ಎತ್ತದೆ, ಅವರ ಆಟವನ್ನು ಆನಂದಿಸಲು ಆರಂಭಿಸಿತು. ಕಿವೀಸ್ ವಿರುದ್ಧದ 2ನೇ ಟೆಸ್ಟ್ಗೆ ಮುನ್ನಾದಿನ ಅಂದರೆ ಗುರುವಾರ ಪಂತ್ ಈ ಪಂದ್ಯ ಆಡಿದ್ದರು.