ನವದೆಹಲಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಎರಡನೇ ಚಿನ್ನದ ಪದಕ ಗೆಲ್ಲುವ ತಯಾರಿಯಲ್ಲಿದ್ದಾರೆ. ಟೊಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿರುವ ಜಾವೆಲಿನ್ ಹೀರೋ ಆ ಇತಿಹಾಸವನ್ನು ಪುನರಾವರ್ತಿಸಲು ಕಾತರರಾಗಿದ್ದಾರೆ. ಅರ್ಹತಾ ಸುತ್ತಿನ ಮೊದಲ ಯತ್ನದಲ್ಲೇ 89.34 ಮೀಟರ್ ದೂರ ಜಾವೆಲಿನ್ ಎಸೆದು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್ ಭದ್ರಪಡಿಸಿಕೊಂಡರು.
ಫೈನಲ್ನಲ್ಲಿ ನೀರಜ್ ಅವರು ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ ಅವರನ್ನು ಎದುರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರೊಬ್ಬರು ಕ್ರೀಡಾಭಿಮಾನಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ. ನೀರಜ್ ಚೋಪ್ರಾ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ 1,00,089 ರೂ. ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ನಾವೀಗ ತಿಳಿಯೋಣ.
ನೀರಜ್ ಚೋಪ್ರಾ ಪದಕ ಗೆಲ್ಲಲಿ ಎಂದು 140 ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ ಕ್ರೀಡಾಭಿಮಾನಿಗಳಿಗೆ ಬಂಪರ್ ಆಫರ್ ಘೋಷಣೆ ಮಾಡಿದ್ದಾರೆ. ಒಂದು ವೇಳೆ ನೀರಜ್ ಚೋಪ್ರಾ ಅವರು ಚಿನ್ನದ ಪದಕ ಗೆದ್ದರೆ 1,00,089 ರೂ. ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ ಅದೃಷ್ಟಶಾಲಿಗೆ ಒಂದು ಲಕ್ಷದ 89 ರೂಪಾಯಿಗಳನ್ನು ಉಡುಗೊರೆಯಾಗಿ ನೀಡುತ್ತೇನೆ. ಅದಕ್ಕೆ ನೀವೇನು ಮಾಡಬೇಕು ಅಂದರೆ, ನನ್ನ ಟ್ವೀಟ್ ಅನ್ನು ಲೈಕ್ ಮಾಡಿ ಮತ್ತು ಕಾಮೆಂಟ್ ಮಾಡಬೇಕು. ಯಾರು ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಮಾಡುತ್ತಾರೋ ಅವರಿಗೆ ನಾನು ಹಣವನ್ನು ನೀಡುತ್ತೇನೆ. ಅಲ್ಲದೆ, ಟಾಪ್ 10ರೊಳಗೆ ಇರುವವರಿಗೂ ನಾನು ವಿಮಾನ ಟಿಕೆಟ್‌ಗಳನ್ನು ಪ್ರಾಯೋಜಿಸುತ್ತೇನೆ. ಭಾರತದ ಜೊತೆಗೆ ಪ್ರಪಂಚದಾದ್ಯಂತದ ಜನರು ನನ್ನ ಸಹೋದರ ನೀರಜ್ ಚೋಪ್ರಾ ಅವರನ್ನು ಬೆಂಬಲಿಸಬೇಕು ಎಂದು ರಿಷಬ್ ಪಂತ್ ಬರೆದಿದ್ದಾರೆ. ಅಲ್ಲದೆ, ಮತ್ತೇಕೆ ತಡ? ಎನ್ನುವ ಮೂಲಕ ಕೂಡಲೇ ಟ್ವೀಟ್ ಲೈಕ್ ಮಾಡಿ, ಕಾಮೆಂಟ್ಸ್ ಹಾಕಿ ಎಂದಿದ್ದಾರೆ.
ಟೊಕಿಯೋದಲ್ಲಿ ಚಿನ್ನದ ಪದಕ ಗೆದ್ದು ಭಾರತೀಯರ ಪಾಲಿಗೆ ಚಿನ್ನದ ಹುಡುಗ ಎನಿಸಿದ್ದ ನೀರಜ್ ಚೋಪ್ರಾ ಪ್ಯಾರಿಸ್ನಲ್ಲೂ ಇದನ್ನು ಮರುಕಳಿಸಿ ಅವಳಿ ಒಲಿಂಪಿಕ್ಸ್ ಚಿನ್ನದ ಒಡೆಯರಾಗುವ ನಿರೀಕ್ಷೆ ಬಿತ್ತಿದ್ದಾರೆ. ಮಂಗಳವಾರ ನಡೆದ ಪುರುಷರ ಜಾವೆಲಿನ್ ಎಸೆತದ ಅರ್ಹತಾ ಸುತ್ತಿನಲ್ಲಿ ನೀರಜ್ ಮೊದಲ ಎಸೆತದಲ್ಲೇ 89.34 ಮೀ. ದೂರಕ್ಕೆ ಭರ್ಜಿ ಎಸೆದು ನೇರವಾಗಿ ಫೈನಲ್ಗೇರಿದ್ದಲ್ಲದೆ, ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನವನ್ನೂ ಅಲಂಕರಿಸಿದರು. ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್ ಜೆನಾ ಗರಿಷ್ಠ 80.73 ಮೀ. ಭರ್ಜಿ ಎಸೆದು ಫೈನಲ್ಗೇರಲು ವಿಫಲರಾದರು. (ಏಜೆನ್ಸೀಸ್)