ಕ್ರೀಡೆ

ದೆಹಲಿಯಲ್ಲಿ ಕ್ಯಾಪಿಟಲ್ಸ್ ದರ್ಬಾರ್: ರಿಷಭ್ ಪಂತ್ ಬಿರುಸಿನ ಬ್ಯಾಟಿಂಗ್

ನವದೆಹಲಿ: ನಾಯಕ ರಿಷಭ್ ಪಂತ್ (88* ರನ್, 43 ಎಸೆತ, 5 ಬೌಂಡರಿ, 8 ಸಿಕ್ಸರ್) ಬಿರುಸಿನಾಟದ ಬಲದಿಂದ ಸ್ಲಾಗ್ ಓವರ್‌ಗಳಲ್ಲಿ ಬೌಂಡರಿ-ಸಿಕ್ಸರ್ ಮಳೆ ಹರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-17ರಲ್ಲಿ ಹಾಲಿ ರನ್ನರ್‌ಅಪ್ ಗುಜರಾತ್ ಟೈಟಾನ್ಸ್ ಎದುರು 4 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಗುಜರಾತ್ ಟೈಟಾನ್ಸ್ ಎದುರು ಹಾಲಿ ಆವೃತ್ತಿಯ 2 ಮುಖಾಮುಖಿಯಲ್ಲೂ ಗೆದ್ದ ರಿಷಭ್ ಪಂತ್ ಬಳಗ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ್ದರೆ, ಶುಭಮಾನ್ ಗಿಲ್ ಬಳಗ 7ನೇ ಸ್ಥಾನಕ್ಕೆ ಕುಸಿದಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ, 44 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಳಿಕ ಆಲ್ರೌಂಡರ್ ಅಕ್ಷರ್ ಪಟೇಲ್ (66 ರನ್, 43 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಗೂ ರಿಷಭ್ ಪಂತ್ ಜತೆಯಾಟದ ನೆರವಿನಿಂದ ಚೇತರಿಸಿಕೊಂಡು 4 ವಿಕೆಟ್‌ಗೆ 224 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ನಾಯಕ ಶುಭಮಾನ್ ಗಿಲ್ (6) ವಿಕೆಟ್ ಬೇಗನೆ ಕಳೆದುಕೊಂಡ ಗುಜರಾತ್, ಸಾಯಿ ಸುದರ್ಶನ್ (65 ರನ್, 39 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (55 ರನ್, 23 ಎಸೆತ, 6 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ 8 ವಿಕೆಟ್‌ಗೆ 220 ರನ್ ಗಳಿಸಿ ಸೋಲುಂಡಿದೆ.

ಸುದರ್ಶನ್- ಮಿಲ್ಲರ್ ಹೋರಾಟ ವ್ಯರ್ಥ: ಶುಭಮಾನ್ ಗಿಲ್ ವಿಕೆಟ್ ಪಡೆದ ಡೆಲ್ಲಿ ಆರಂಭದಲ್ಲೇ ಮೇಲುಗೈ ಸಾಧಿಸಿತು. ಆಗ ಜತೆಯಾದ ವೃದ್ಧಿಮಾನ್ (39) ಹಾಗೂ ಸಾಯಿ ಸುದರ್ಶನ್ ಚೇಸಿಂಗ್‌ಗೆ ಬಲ ತುಂಬಿದರು. ಇವರಿಬ್ಬರು 2ನೇ ವಿಕೆಟ್‌ಗೆ 49 ಎಸೆತಗಳಲ್ಲಿ 89 ರನ್‌ಗಳಿಸಿ ಡೆಲ್ಲಿ ಬೌಲರ್‌ಗಳಿಗೆ ಸವಾಲೆನಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ ಕುಲದೀಪ್ ಯಾದವ್ ಟೈಟಾನ್ಸ್ ಓಟಕ್ಕೆ ಬ್ರೇಕ್ ಹಾಕಿದರು. ನಂತರ ಅಜ್ಮತ್‌ಉಲ್ಲಾ ಒಮರ್ಜಾಯಿ(1) ನಿರಾಸೆ ಮೂಡಿಸಿದರು. ಸುದರ್ಶನ್ ಜತೆಯಾದ ಡೇವಿಡ್ ಮಿಲ್ಲರ್ 4ನೇ ವಿಕೆಟ್‌ಗೆ 22 ರನ್ ಪೇರಿಸಿದರು. ಇಂಪ್ಯಾಕ್ಟ್ ಪ್ಲೇಯರ್ ರಸಿಕ್ ಸಲಾಂ, ಸುದರ್ಶನ್ ಹಾಗೂ ಶಾರುಖ್ ಖಾನ್ (8) ವಿಕೆಟ್ ಪಡೆದು ಗುಜರಾತ್‌ಗೆ ಕಡಿವಾಣ ಹೇರಿದರು. ಒಂದೆಡೆ ವಿಕೆಟ್ ಉರುಳಿದರೂ ಗುಜರಾತ್ ಹೋರಾಟ ಜೀವಂತವಿರಿಸಿದ ಮಿಲ್ಲರ್ ಏಕಾಂಗಿ ಹೋರಾಟ ನಡೆಸಿದರು. 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗೆಲುವಿನ ಆಸೆ ಹುಟ್ಟಿಸಿದರು. ಇದರ ಬೆನ್ನಲ್ಲೇ 18ನೇ ಓವರ್‌ನಲ್ಲಿ ಮುಕೇಶ್‌ಗೆ ವಿಕೆಟ್ ನೀಡಿದರು. ಸಾಯಿ ಕಿಶೋರ್ (15) ಉಪಯುಕ್ತ ಕೊಡುಗೆ ನೀಡಿದರು. ಕೊನೇ ಓವರ್‌ನಲ್ಲಿ 19 ರನ್ ಬೇಕಿದ್ದಾಗ 2 ಬೌಂಡರಿ-1 ಸಿಕ್ಸರ್ ಸಿಡಿಸಿದ ರಶೀದ್ ಖಾನ್ (21*) ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಸಾಧ್ಯವಾಯಿತು.