ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್&ಬ್ಯಾಟರ್ ರಿಷಭ್ ಪಂತ್ ಹಣಕಾಸಿಕ ಕಾರಣದಿಂದಾಗಿ ತಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರಿಟೇನ್ ಆಗದೆ ಹೊರಬಂದಿಲ್ಲ ಎಂದು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸುನೀಲ್ ಗಾವಸ್ಕರ್, ಪಂತ್ ರಿಟೇನ್ ಮೊತ್ತದ ಬಗ್ಗೆ ಅಸಮಾಧಾನಗೊಂಡು ಡೆಲ್ಲಿ ತಂಡದಿಂದ ಹೊರಬಂದಿರಬಹುದು. ಹರಾಜಿನಲ್ಲಿ ಡೆಲ್ಲಿ ತಂಡ ದೊಡ್ಡ ಮೊತ್ತದ ಬಿಡ್ ಸಲ್ಲಿಸಿದರೆ ಮತ್ತೆ ಡೆಲ್ಲಿ ತಂಡಕ್ಕೆ ಮರಳಬಹುದು ಎಂದು ವಿಶ್ಲೇಷಿಸಿದ್ದರು. ಇದರ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಪಂತ್, "ನಾನು ರಿಟೇನ್ ಆಗದಿರುವುದು ಹಣದ ವಿಚಾರಕ್ಕಂತೂ ಅಲ್ಲ ಎಂಬುದನ್ನು ಖಚಿತಪಡಿಸಲು ಬಯಸುತ್ತೇನೆ' ಎಂದಿದ್ದಾರೆ. ಇದರಿಂದಾಗಿ ಪಂತ್, ಬೇರಾವುದೋ ವಿಚಾರದ ಭಿನ್ನಾಭಿಪ್ರಾಯದಿಂದ ಡೆಲ್ಲಿ ತಂಡ ತ್ಯಜಿಸಿರುವುದು ಕೂಡ ಸ್ಪಷ್ಟವಾಗಿದೆ.
ಐಪಿಎಲ್ ಹರಾಜಿನಲ್ಲಿ ಪಂತ್ 2 ಕೋಟಿ ರೂ. ಮೂಲಬೆಲೆಯೊಂದಿಗೆ ಪಾಲ್ಗೊಳ್ಳಲಿದ್ದಾರೆ. ವಿಕೆಟ್ ಕೀಪಿಂತ್-ಬ್ಯಾಟಿಂಗ್ ಜತೆಗೆ ನಾಯಕತ್ವ ನಿರ್ವಹಣೆಯ ಸಾಮರ್ಥ್ಯವನ್ನೂ ಹೊಂದಿರುವ ಅವರಿಗೆ 20 ಕೋಟಿ ರೂ.ವರೆಗೂ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ. 2016ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದಾಗಿನಿಂದ ಪಂತ್ ತವರಿನ ಡೆಲ್ಲಿ ತಂಡದಲ್ಲೇ ಇದ್ದರು. 111 ಪಂದ್ಯಗಳಲ್ಲಿ ಅವರು 1 ಶತಕ, 18 ಅರ್ಧಶತಕಗಳ ಸಹಿತ 3,284 ರನ್ ಬಾರಿಸಿದ್ದಾರೆ.