ಕ್ರೀಡೆ

ಈ ಹೋಲಿಕೆ ಬೇಡ: 'ಕ್ಯಾಪ್ಟನ್​ ಕೂಲ್'​ ಬಗ್ಗೆ ರಿಷಬ್​ ಪಂತ್​ ಆಡಿದ ಮುತ್ತಿನಂತ ಮಾತುಗಳಿವು

ಮೋಹನ್​ ಶೆಟ್ಟಿ

ತಮಿಳುನಾಡು: ಇಲ್ಲಿನ ಚೇಪಾಕ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ತಂಡದ ಅತ್ಯುತ್ತಮ​ ಪ್ರದರ್ಶನದ ಮೂಲಕ ಬಾಂಗ್ಲಾ ಪಡೆಯನ್ನು ಬಗ್ಗುಬಡಿದ ಟೀಮ್ ಇಂಡಿಯಾ, 280 ರನ್​ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತು. ಮೊದಲ ದಿನದ ಇನ್ನಿಂಗ್ಸ್​ನಲ್ಲಿ ಟೀಮ್​ನ ಪರ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ, ಶತಕ ಬಾರಿಸಿದ ಆರ್​. ಅಶ್ವಿನ್​, ಎರಡನೇ ದಿನದಂದು 6 ವಿಕೆಟ್​ಗಳನ್ನು ಕಬಳಿಸಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣರಾಗಿ ಹೊರಹೊಮ್ಮಿದ್ದಾರೆ. ಇನ್ನು ಇದೇ ಪಂದ್ಯದಲ್ಲಿ ಮಿಂಚಿದ ವಿಕೆಟ್ ಕೀಪರ್​-ಬ್ಯಾಟ್ಸ್​ಮನ್​ ರಿಷಬ್​ ಪಂತ್ ಇದೀಗ​ ಹೊಸ ದಾಖಲೆಗೆ ಸಾಕ್ಷಿಯಾಗಿರುವುದು ವಿಶೇಷ.

ಬಾಂಗ್ಲಾ ವಿರುದ್ಧದ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿದ ರಿಷಬ್ ಪಂತ್​, ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ, ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಅವರ ದಾಖಲೆಯನ್ನು ಸರಿಗಟ್ಟಿದರು. ಈ ಮೈಲಿಗಲ್ಲನ್ನು ಮಾಹಿ 90 ಪಂದ್ಯಗಳಲ್ಲಿ ತಲುಪಿದ್ದರೆ, ಪಂತ್ ಕೇವಲ 34 ರೆಡ್​ ಬಾಲ್​ ಮ್ಯಾಚ್​ಗಳಲ್ಲಿ ಸಾಧಿಸಿದ್ದಾರೆ. ಇದು ಅನೇಕರಿಗೆ ಭಾರಿ ವಿಶೇಷ ಅನಿಸಿದ್ದು, ರಿಷಬ್​ರನ್ನು ಧೋನಿಗೆ ಹೋಲಿಸಿ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಮುಂದಿನ ಧೋನಿ ಇವರೇ. ಕೀಪರ್​-ಬ್ಯಾಟ್ಸ್​ಮನ್ ಆಗಿ ಪಂತ್​ ಧೋನಿ ಸ್ಥಾನವನ್ನು ತುಂಬಬಲ್ಲರು ಎಂಬ ಅಭಿಪ್ರಾಯಗಳು ಜಾಲತಾಣಗಳಲ್ಲಿ ವ್ಯಕ್ತವಾಗಿವೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ರಿಷಬ್ ಕೊಟ್ಟ ಉತ್ತರ ಹೀಗಿದೆ.

"ದಯವಿಟ್ಟು ನನ್ನನ್ನು ಮಹೇಂದ್ರ ಸಿಂಗ್ ಧೋನಿ ಅವರಿಗೆ ಹೋಲಿಸಬೇಡಿ. ನಾವು ಆಡಿದ ಈ ಪಂದ್ಯ 'ಕ್ಯಾಪ್ಟನ್ ಕೂಲ್' ಅವರ ಚೆನ್ನೈ ಸೂಪರ್ ಕಿಂಗ್ಸ್​ ತವರೂರು. ಇಲ್ಲಿ ಮಾಹಿ ಬಾಯ್​ ಅದೆಷ್ಟೋ ಪಂದ್ಯಗಳನ್ನಾಡಿದ್ದಾರೆ. ನಾನು ನಾನಾಗಿರಲು ಬಯಸುತ್ತೇನೆ ಹೊರತು ಧೋನಿ ಸ್ಥಾನವನ್ನು ಅಥವಾ ಅವರಂತೆ ನಾನು ಎಂದು ಊಹಿಸಿಕೊಳ್ಳುವುದಿಲ್ಲ. ಇದರ ಬಗ್ಗೆ ಜನ ಏನು ಹೇಳ್ತಿದ್ದಾರೆ ಅದು ಅವರವರ ಅಭಿಪ್ರಾಯ, ಅನಿಸಿಕೆಗಳು. ನನ್ನ ಕೆಲಸ ಉತ್ತಮ ಪ್ರದರ್ಶನ ನೀಡುವುದೇ ಅಷ್ಟೇ" ಎಂದು ಹೇಳಿದರು,(ಏಜೆನ್ಸೀಸ್).