ಮುಂಬೈ: ಸತತ 2 ಜಯದೊಂದಿಗೆ ಉತ್ತಮ ಲಯಕ್ಕೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಅಸ್ಥಿರ ನಿರ್ವಹಣೆಯಿಂದಾಗಿ ಒತ್ತಡಕ್ಕೆ ಸಿಲುಕಿರುವ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರಲ್ಲಿ ಶುಕ್ರವಾರ ಮುಖಾಮುಖಿ ಆಗಲಿವೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಪ್ಲೇಆಫ್ ರೇಸ್‌ನಲ್ಲಿ ಹೆಚ್ಚಿನ ಬಲ ಪಡೆದುಕೊಳ್ಳುವ ದೃಷ್ಟಿಯಿಂದ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.
ಕರ್ನಾಟಕದ ತಂಡವಾದ ಆರ್‌ಸಿಬಿ ಮತ್ತು ಕನ್ನಡಿಗರಾದ ಅನಿಲ್ ಕುಂಬ್ಳೆ ಮಾರ್ಗದರ್ಶನ, ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡಗಳು ಟೂರ್ನಿಯಲ್ಲಿ ಪರಸ್ಪರ ಮುಖಾಮುಖಿಯ ಮೂಲಕವೇ ಅಭಿಯಾನ ಆರಂಭಿಸಿದ್ದವು. ಆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆದ್ದಿದ್ದರೂ ಸದ್ಯ ಆರ್‌ಸಿಬಿ ತಂಡವೇ ಅದಕ್ಕಿಂತ ಸುಸ್ಥಿತಿಯಲ್ಲಿದೆ. ಆರ್‌ಸಿಬಿ ಇದುವರೆಗೆ ಆಡಿದ 12ರಲ್ಲಿ 7ರಲ್ಲಿ ಗೆದ್ದು 5ರಲ್ಲಿ ಸೋತಿದ್ದರೆ, ಪಂಜಾಬ್ ತಂಡ 11ರಲ್ಲಿ 5ರಲ್ಲಿ ಗೆದ್ದು, 6ರಲ್ಲಿ ಸೋತಿದೆ. ಹೀಗಾಗಿ ಫಾಫ್ ಡು ಪ್ಲೆಸಿಸ್ ಬಳಗಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಅವಕಾಶ ಎದುರಾಗಿದೆ.
ಪ್ಲೇಆಫ್ ಲೆಕ್ಕಾಚಾರ
ಆರ್‌ಸಿಬಿ: ಈ ಪಂದ್ಯ ಗೆದ್ದರೆ ಆರ್‌ಸಿಬಿ ಪ್ಲೇಆಫ್ ಹಾದಿ ಸುಗಮವಾಗಲಿದೆ. ಬಳಿಕ ಕೊನೇ ಪಂದ್ಯದಲ್ಲೂ ಗೆದ್ದರೆ ಪ್ಲೇಆ್ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಈ ಪಂದ್ಯ ಸೋತರೆ, ಆರ್‌ಸಿಬಿ ತನ್ನ ಕೊನೇ ಪಂದ್ಯದಲ್ಲಿ ಅಗ್ರಸ್ಥಾನಿ ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಜತೆಗೆ ಡೆಲ್ಲಿ, ಸನ್‌ರೈಸರ್ಸ್, ಪಂಜಾಬ್, ರಾಜಸ್ಥಾನ ಪೈಕಿ 3 ತಂಡವಾದರೂ ಇನ್ನೊಂದು ಸೋಲು ಕಾಣಲಿ ಅಥವಾ ರನ್‌ರೇಟ್‌ನಲ್ಲಿ ತನಗಿಂತ ಹಿಂದುಳಿಯಲಿ ಎಂದು ಪ್ರಾರ್ಥಿಸಬೇಕಾಗುತ್ತದೆ.
ಪಂಜಾಬ್ ಕಿಂಗ್ಸ್: ಪ್ಲೇಆಫ್ ಆಸೆ ಜೀವಂತಕ್ಕೆ ಪಂಜಾಬ್ ತನ್ನ ಉಳಿದ ಮೂರೂ ಪಂದ್ಯಗಳಲ್ಲಿ ಆರ್‌ಸಿಬಿ, ಡೆಲ್ಲಿ, ಸನ್‌ರೈಸರ್ಸ್ ವಿರುದ್ಧ ಗೆಲ್ಲಬೇಕು. ಜತೆಗೆ ಇತರ ಫಲಿತಾಂಶಗಳು ಪೂರಕವಾಗಿ ಬರಬೇಕು ಮತ್ತು ರನ್‌ರೇಟ್ ಕೂಡ ಸುಧಾರಿಸಿಕೊಳ್ಳಬೇಕು.
ಟೀಮ್ ನ್ಯೂಸ್
ಆರ್‌ಸಿಬಿ: ವೇಗಿ ಮೊಹಮದ್ ಸಿರಾಜ್ ಇದುವರೆಗೆ ಆಡಿದ 12 ಪಂದ್ಯಗಳಲ್ಲಿ 8 ವಿಕೆಟ್ ಮಾತ್ರ ಗಳಿಸಿದ್ದಾರೆ ಮತ್ತು 9.44ರ ಎಕಾನಮಿಯಲ್ಲಿ 43 ಓವರ್‌ಗಳಲ್ಲಿ 406 ರನ್ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಕೈಬಿಟ್ಟು ಸಿದ್ಧಾರ್ಥ್ ಕೌಲ್ ಅಥವಾ ಚಾಮ ಮಿಲಿಂದ್‌ಗೆ ಅವಕಾಶ ನೀಡಬಹುದು.
ಕಳೆದ ಪಂದ್ಯ: ಸನ್‌ರೈಸರ್ಸ್ ವಿರುದ್ಧ 67 ರನ್ ಜಯ.
ಪಂಜಾಬ್ ಕಿಂಗ್ಸ್: ರಾಹುಲ್ ಚಹರ್‌ಗೆ ಸಾಥ್ ನೀಡಲು 2ನೇ ಸ್ಪಿನ್ನರ್ ಆಗಿ ಹರ್‌ಪ್ರೀತ್ ಬ್ರಾರ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅವರಿಗೆ ಸಂದೀಪ್ ಶರ್ಮ ಅಥವಾ ರಿಷಿ ಧವನ್ ಸ್ಥಾನ ಬಿಟ್ಟುಕೊಡಬಹುದು.
ಕಳೆದ ಪಂದ್ಯ: ರಾಜಸ್ಥಾನ ವಿರುದ್ಧ 6 ವಿಕೆಟ್ ಸೋಲು.
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಮುಖಾಮುಖಿ: 29
ಆರ್‌ಸಿಬಿ: 13
ಪಂಜಾಬ್: 16
ಕಳೆದ ಮುಖಾಮುಖಿ: ಪಂಜಾಬ್ ಕಿಂಗ್ಸ್‌ಗೆ 5 ವಿಕೆಟ್ ಜಯ.