ಕ್ರೀಡೆ

ರಿಚಾ ಘೋಷ್​​ ಇನ್ಮುಂದೆ ಬಂಗಾಳ ಡಿಸಿಪಿ: ನೇಮಕಾತಿ ಪತ್ರ ಹಸ್ತಾಂತರಿಸಿದ ಸಿಎಂ ಮಮತಾ ಬ್ಯಾನರ್ಜಿ | Richa Ghosh

 ಕೋಲ್ಕತ್ತಾ: ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ವಿಶ್ವಕಪ್‌ನಲ್ಲಿ ವಿಕೆಟ್​ ಕೀಪಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಅದ್ಬುತ ಪ್ರದರ್ಶನ ನೀಡಿರುವ ರಿಚಾ ಘೋಷ್​​ರನ್ನು (Richa Ghosh) ಪಶ್ಚಿಮ ಬಂಗಾಳ ಸರ್ಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಆಗಿ ನೇಮಿಸಿದೆ.

ಇಂದು (ಶನಿವಾರ ನವೆಂಬರ್ 8) ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಿಚಾ ಘೋಷ್​ರಿಗೆ ನೇಮಕಾತಿ ಪತ್ರ ಹಸ್ತಾಂತರಿಸಿದರು.

ಇದೇ ವೇಳೆ 22 ವರ್ಷದ ರಿಚಾಗೆ ಪ್ರತಿಷ್ಠಿತ ಬಂಗ ಭೂಷಣ್ ಪ್ರಶಸ್ತಿಯನ್ನೂ ಸಹ ನೀಡಿ ಗೌರವಿಸಿ, ಚಿನ್ನದ ಬ್ಯಾಟ್ ಮತ್ತು ಬಾಲ್​ ಹಾಗೂ 34 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿತು. ಹೆಚ್ಚುವರಿಯಾಗಿ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಪರವಾಗಿ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ಜೂಲನ್ ಗೋಸ್ವಾಮಿಯಂತಹ ಆಟಗಾರ್ತಿಯರು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಅಡಿಪಾಯ ಹಾಕಿದರೆ, ಇತ್ತ ರಿಚಾ ಘೋಷ್ ಮತ್ತು ತಂಡ ಭಾರತ ಮಹಿಳಾ ತಂಡದ ಐಸಿಸಿ ಪ್ರಶಸ್ತಿಯ ಸುಧೀರ್ಘ ಕಾಯುವಿಕೆಗೆ ಅಂತ್ಯ ಹಾಡಿದರು. ರಿಚಾ ಎಲ್ಲಾ ರೀತಿಯ ಪ್ರಶಂಸೆಗೆ ಅರ್ಹರಾಗಿದ್ದರೂ ಕೂಡ ಅವರ ಮೇಲೆ ಹೆಚ್ಚುವರಿ ಒತ್ತಡ ಹೇರದಂತೆ ಜಾಗೃತಿ ವಹಿಸುವುದು ಅಷ್ಟೇ ಮುಖ್ಯ ಎಂದರು, ಇದೇ ವೇಳೆ ತಂಡದ ಕೋಚ್, ಇತರ ಸದಸ್ಯರು, ಸಹಾಯಕ ಸಿಬ್ಬಂದಿ ಮತ್ತು ಎಲ್ಲಾ ಆಟಗಾರರ ಪೋಷಕರಿಗೆ ಅಭಿನಂದನೆಗಳು ಸಲ್ಲಿಸಿದರು.

ರಿಚಾ ತಮ್ಮ ವೃತ್ತಿ ಜೀವನದ ಪ್ರಯಾಣವನ್ನು ಈಗ ತಾನೇ ಪ್ರಾರಂಭಿಸಿದ್ದು, ನಮ್ಮ ರಾಜ್ಯದ ಹೆಣ್ಣುಮಕ್ಕಳು ಯಾವಾಗಲೂ ಉನ್ನತ ಸ್ಥಾನದಲ್ಲಿರಬೇಕೆಂದು ನನ್ನ ಬಯಕೆ, ಅವರೆಲ್ಲಾ ಫುಟ್ಬಾಲ್, ಸ್ವಿಮ್ಮಿಂಗ್​ ಮತ್ತು ಬಿಲ್ಲುಗಾರಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ರಿಚಾ ಘೋಷ್​ ವಿಶ್ವಕಪ್​ ಅಭಿಯಾನ..

ಭಾರತದ ವಿಶ್ವಕಪ್ ಅಭಿಯಾನದುದ್ದಕ್ಕೂ ರಿಚಾ ಘೋಷ್ ಅತ್ಯುತ್ತಮ ಪ್ರದರ್ಶನ ನೀಡಿದ್ದು. ಆಡಿರುವ ಎಂಟು ಪಂದ್ಯಗಳಲ್ಲಿ 39.16 ಸರಾಸರಿ ಮತ್ತು 133.52 ಸ್ಟ್ರೈಕ್ ರೇಟ್‌ನಲ್ಲಿ 235 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ 94 ರನ್ ಗಳಿಸುವ ಮೂಲಕ ವೈಜಾಜ್​ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. ನವಿ ಮುಂಬೈನಲ್ಲಿ ನಡೆದ ಪೈನಲ್​ ಪಂದ್ಯದಲ್ಲಿಯೂ ನಿರ್ಣಾಯಕ 34 ರನ್‌ ಬಾರಿಸಿದರು.(ಏಜೆನ್ಸೀಸ್​)