ಕ್ರೀಡೆ

ಆತ ಯಾರು ಅನ್ನೋದೇ ನನಗೆ ಗೊತ್ತಿಲ್ಲ! ಟ್ರೋಫಿ ಹೊತ್ತೊಯ್ದ ಮೊಹ್ಸಿನ್​ ನಖ್ವಿಗೆ ಮಾಜಿ ಅಂಪೈರ್​ ಛೀಮಾರಿ | Asia Cup Trophy

ನವದೆಹಲಿ: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯವನ್ನು ಭಾರತ ಗೆದ್ದಿದ್ದೇ ಆದರೂ ಟ್ರೋಫಿ (Asia Cup Trophy ) ಮತ್ತು ಮೆಡಲ್​ಗಳು ಮಾತ್ರ ಇನ್ನೂ ಆಟಗಾರರಿಗೆ ಸಿಕ್ಕಿಲ್ಲ. ಅದಕ್ಕೆ ಮೂಲ ಕಾರಣ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯ ನರಿ ಬುದ್ಧಿ. ಅಂದು ಮೈದಾನದಿಂದ ಟ್ರೋಫಿ ಹೊತ್ತೊಯ್ದ ಈತ, ಇಂದಿಗೂ ಅದನ್ನು ಭಾರತ ತಂಡಕ್ಕೆ ಹಸ್ತಾಂತರಿಸಿಲ್ಲ. ಇದೀಗ ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಅಂಪೈರ್​, ಪಾಕ್ ಕ್ರಿಕೆಟ್​ ಅಧ್ಯಕ್ಷನ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.

ಈಗಾಗಲೇ ಬಿಸಿಸಿಐ ಐಸಿಸಿಗೆ ದೂರು ನೀಡಿದ್ದು, ಶೀಘ್ರವೇ ಏಷ್ಯಾಕಪ್​ ಟ್ರೋಫಿ ಮತ್ತು ಮೆಡಲ್​ಗಳನ್ನು ಹಸ್ತಾಂತರಿಸುವಂತೆ ತಿಳಿಸಲಾಗಿದೆ. ಇಷ್ಟಾದರೂ ತನ್ನ ಸೊಕ್ಕಿನ ನಡೆಯನ್ನು ಮುಂದುವರಿಸಿರುವ ನಖ್ವಿ, ದುಬೈ ಕಚೇರಿಯಲ್ಲಿ ಟ್ರೋಫಿಯನ್ನಿಟ್ಟು, ಅಲ್ಲಿಗೆ ಯಾರೂ ಹೋಗದಂತೆ ನೋಡಿಕೊಳ್ಳಲು ಸಿಬ್ಬಂದಿಗಳಿಗೆ ಎಚ್ಚರಿಸಿರುವುದಾಗಿ ವರದಿಯಾಗಿದೆ. ಪಿಸಿಬಿ ಅಧ್ಯಕ್ಷನ ಈ ನಡೆಗೆ ಮಾಜಿ ಅಂಪೈರ್​ ಚೌಧರಿ ಛೀಮಾರಿ ಹಾಕಿದ್ದಾರೆ.

ಮೊದಲಿಗೆ ಆತ ಯಾರೆಂದು ನನಗೆ ಗೊತ್ತಿಲ್ಲ. ಎಲ್ಲಿಯೂ ಭೇಟಿಯಾಗಿಲ್ಲ. ಟೀಮ್ ಇಂಡಿಯಾ ಆಟಗಾರರು ಗೆದ್ದ ಪ್ರಶಸ್ತಿಯನ್ನು ನಖ್ವಿ ಹೊತ್ತೊಯ್ದದ್ದು ಸರಿಯಲ್ಲ. ಅಲ್ಲಿ ಯಾರು ಬೇಕಾದರೂ ಟ್ರೋಫಿಯನ್ನು ಗೆದ್ದ ತಂಡಕ್ಕೆ ಹಸ್ತಾಂತರಿಸಬಹುದಿತ್ತು. ಎಸಿಸಿ ಅಧ್ಯಕ್ಷರೇ ಟ್ರೋಫಿ ನೀಡಬೇಕು ಎಂದು ಎಲ್ಲಿಯೂ ಬರೆದಿಲ್ಲ. ಹಾಗಂತ, ಯಾವ ನಿಯಮವೂ ಇಲ್ಲ. ನನ್ನ ಅಂಪೈರ್​ ವೃತ್ತಿಯಲ್ಲಿ ಇಂತಹ ಘಟನೆ ಎಂದೂ ನಾನು ಕಂಡಿಲ್ಲ. ಈ ಪ್ಯಾಂಟು-ಕೋಟು ಧರಿಸುವ ವ್ಯಕ್ತಿಗಳನ್ನು ಭೇಟಿ ಮಾಡುವ ಅಭ್ಯಾಸ ನನಗಿಲ್ಲ ಎಂದು ನಖ್ವಿಗೆ ಛೀಮಾರಿ ಹಾಕಿದ್ದಾರೆ.

ನಖ್ವಿ ನರಿಬುದ್ಧಿ!

ಫೈನಲ್​ಗೆ ಬರುವ ಮೊದಲೇ ನಾವು ಫೈನಲ್​ನಲ್ಲಿ ಗೆದ್ದರೆ, ಖಂಡಿತ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದರು. ಅಂತೆಯೇ, ಅಂತಿಮ ಹಣಾಹಣಿಯಲ್ಲಿ ಪಾಕ್​ನ ಮಣಿಸಿದ ಭಾರತ ತಂಡ, ಟ್ರೋಫಿಯನ್ನು ಪಡೆಯಲು ವೇದಿಕೆ ಮೇಲೆ ಹೋಗಲಿಲ್ಲ. ಬದಲಿಗೆ ಮೈದಾನದಲ್ಲೇ ಮೊಬೈಲ್ ನೋಡುತ್ತ ಕುಳಿತ್ತಿತ್ತು. ಇದು ಮೊಹ್ಸಿನ್​ ನಖ್ವಿ ಕೋಪಕ್ಕೆ ಕಾರಣವಾಯಿತು. ಕೂಡಲೇ ಏಷ್ಯಾಕಪ್ ಟ್ರೋಫಿ ಮತ್ತು ಮೆಡಲ್​ಗಳನ್ನು ತನ್ನೊಂದಿಗೆ ಹೊತ್ತೊಯ್ದ ನಖ್ವಿ, ಇಲ್ಲಿಯವರೆಗೂ ಅದನ್ನು ಆಟಗಾರರಿಗೆ ವಾಪಾಸ್​ ಕೊಡದೆ, ಷರತ್ತು ವಿಧಿಸಿರುವುದು ಸದ್ಯ ಬಿಸಿಸಿಐ ಪಿತ್ತವನ್ನು ನೆತ್ತಿಗೇರಿಸಿದೆ.