ಕ್ರೀಡೆ

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಡೆತ್​ ವಾರಂಟ್​: ಕೋರ್ಟ್​ತೀರ್ಪಿನ ಬಗ್ಗೆ ಯುವರಾಜ್​ ಸಿಂಗ್​ ಹೇಳಿದ್ದು ಹೀಗೆ

ಮುಂಬೈ: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್​ ರೇಪ್​ ಪ್ರಕರಣದ ನಾಲ್ವರು ಅಪರಾಧಿಗಳಿಗೆ ನಿನ್ನೆ ದೆಹಲಿ ಪಟಿಯಾಲಾ ನ್ಯಾಯಾಲಯ ಡೆತ್​ ವಾರಂಟ್ ಜಾರಿ ಮಾಡಿದೆ.

ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅವರನ್ನೆಲ್ಲ ಗಲ್ಲಿಗೇರಿಸಬೇಕು ಎಂದು ತೀರ್ಪು ನೀಡಿದೆ. ಸತತ ಏಳುವರ್ಷಗಳ ನಂತರ ಹೊರಬಿದ್ದ ಅಂತಿಮ ತೀರ್ಪನ್ನು ದೇಶ ಸ್ವಾಗತಿಸಿದೆ.

ನಿರ್ಭಯಾ ಅತ್ಯಾಚಾರ, ಹತ್ಯೆ ಅಪರಾಧಿಗಳಾದ ಮುಕೇಶ್​, ವಿನಯ್​ ಶರ್ಮಾ, ಅಕ್ಷಯ್​ ಸಿಂಗ್​ ಮತ್ತು ಪವನ್​ ಗುಪ್ತಾಗೆ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ ನೀಡಿದ ತೀರ್ಪಿನ ಬಗ್ಗೆ ಮಾಜಿ ಕ್ರಿಕೆಟರ್​ ಯುವರಾಜ್​ ಸಿಂಗ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂದು ಟ್ವೀಟ್ ಮಾಡಿರುವ ಅವರು, ಎಲ್ಲ ನೈತಿಕ ಕರ್ತವ್ಯಗಳ ಸಾರಾಂಶವೇ ನ್ಯಾಯ. ನಿರ್ಭಯಾ ಪ್ರಕರಣದ ತೀರ್ಪು ನೀಡಿದ ದೆಹಲಿ ನ್ಯಾಯಾಲಯವನ್ನು ಪ್ರಶಂಸಿಸಲೇಬೇಕು ಎಂದಿದ್ದಾರೆ. ಅಲ್ಲದೆ, ಅಂದು ಹತ್ಯೆಗೀಡಾದ ನಿರ್ಭಯಾಳದ್ದು ಗಟ್ಟಿ ಮನಸು ಎಂದಿರುವ ಯುವರಾಜ್​ ಸಿಂಗ್​, ಇನ್ನಾದರೂ ಸಂತ್ರಸ್ತೆಯ ಆತ್ಮ ಚಿರಶಾಂತಿಯಲ್ಲಿ ನೆಲೆಸಲಿ ಎಂದು ಹೇಳಿದ್ದಾರೆ.

ಬಿಹಾರದ ಹಳ್ಳಿಯಲ್ಲಿರುವ ನಿರ್ಭಯಾ ತಾತ ಕೂಡ ತೀರ್ಪಿನ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ. ತಡವಾಗಿಯಾದರೂ ನ್ಯಾಯ ಸಿಕ್ಕಿತು ಎಂದಿದ್ದಾರೆ. (ಏಜೆನ್ಸೀಸ್​)