ನವದೆಹಲಿ: ಮಹಾಮಾರಿ ಕೋವಿಡ್-19ರ ವಿರುದ್ಧ ಹೋರಾಡಲು ಇಡೀ ಭಾರತೀಯ ಕ್ರೀಡಾ ಕ್ಷೇತ್ರವೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬೆನ್ನ ಹಿಂದೆ ನಿಂತಿದೆ. ದಿಗ್ಗಜರಾದ ಸಚಿನ್ ತೆಂಡುಲ್ಕರ್, ಸೌರವ್ಗಂಗೂಲಿ ಸೇರಿದಂತೆ ಕ್ರಿಕೆಟ್ ವಲಯದಿಂದ ಸಾಕಷ್ಟು ದೇಣಿಗೆ ಪಿಎಂ-ಕೇರ್ಸ್ಗೆ ಹರಿದು ಬರುತ್ತಿದೆ. ಆದರೆ, ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್, ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಸಾರಥ್ಯದ ಫೌಂಡೇಷನ್ಗೆ ದೇಣಿಗೆಗಳನ್ನು ನೀಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಸಲ್ಲಿಸಿ, ಭಾರತೀಯ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
‘ಇದು ಎಲ್ಲರಿಗೂ ಕಠಿಣ ಸಮಯ. ಒಬ್ಬರಿಗೊಬ್ಬರು ಬೆಂಬಲ ನೀಡಬೇಕು. ನಾನು ಎಸ್ಎ (ಶಾಹಿದ್ ಅಫ್ರಿದಿ) ಫೌಂಡೇಷನ್ ಅನ್ನು ಬೆಂಬಲಿಸುತ್ತೇನೆ. ಕೋವಿಡ್-19ರ ವಿರುದ್ಧದ ಹೋರಾಟಕ್ಕೆ ಕೈಜೋಡಿಬೇಕು’ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ. ಹರ್ಭಜನ್ ಸಿಂಗ್ ಕೂಡ, ‘ಜಗತ್ತು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದೆ. ಎಸ್ಎ ಫೌಂಡೇಷನ್ಗೆ ನಮ್ಮ ನೆರವು ನೀಡೋಣ. ಸಾಧ್ಯವಾದಷ್ಟು ನೆರವು ನೀಡಿ’ ಎಂದು ಟ್ವೀಟಿಸಿದ್ದಾರೆ. ಆದರೆ ಕರೊನಾ ವಿರುದ್ಧದ ಹೋರಾಟಕ್ಕೆ ಭಾರತದಲ್ಲಿ ಇದುವರೆಗೆ ಬಿಡಿಗಾಸು ಕೂಡ ಬಿಚ್ಚದಿರುವ ಯುವಿ, ಬಜ್ಜಿ ಪಾಕಿಸ್ತಾನದ ಜನರಿಗೆ ನೆರವಾಗಲು ಮುಂದಾಗಿರುವುದು ಟೀಕೆಗೆ ಗುರಿಯಾಗಿದೆ.
ಭಾರತದಲ್ಲಿದ್ದರೂ ಭಾರತೀಯರ ಬಗ್ಗೆ ಯೋಚಿಸದೆ, ಕಾಶ್ಮೀರದ ವಿಷಯದಲ್ಲಿ ಯಾವಾಗಲೂ ಭಾರತದ ವಿರುದ್ಧ ಕೆಂಡಕಾರುವ ಅಫ್ರಿದಿಗೆ ಪ್ರೋತ್ಸಾಹ ನೀಡಿರುವುದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅಫ್ರಿದಿ ಫೌಂಡೇಷನ್ ಸದ್ಯ ಪಾಕಿಸ್ತಾನದಲ್ಲಿ 500ಕ್ಕೂ ಅಧಿಕ ಕುಟುಂಬಗಳಿಗೆ ನೆರವಾಗಿ ಸಾಮಾಜಿಕ ಕಾರ್ಯದಲ್ಲಿ ಭಾಗಿಯಾಗಿದೆ.