ಕ್ರೀಡೆ

ಅಹರ್ನಿಶಿ ಟೆಸ್ಟ್‌ಗೆ ದಾಖಲೆಯ ಹಾಜರಾತಿ: ಕಪ್ಪುಪಟ್ಟಿ ಧರಿಸಿದ ಆಸೀಸ್, ಲಕ್ಕಿ ರಾಹುಲ್

ಅಡಿಲೇಡ್: ಪ್ರಮುಖ ಬ್ಯಾಟರ್‌ಗಳ ವೈಲ್ಯದಿಂದಾಗಿ ಪ್ರವಾಸಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯನ್ನರಿಗೆ ಮೇಲುಗೈ ಬಿಟ್ಟುಕೊಟ್ಟಿದೆ. ಪರ್ತ್ ಟೆಸ್ಟ್ ಗೆಲುವಿನ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದ ಭಾರತ ತಂಡ, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ 6) ಜೀವನಶ್ರೇಷ್ಠ ಬೌಲಿಂಗ್ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತಕ್ಕೆ ಕುಸಿಯಿತು. ಇದಕ್ಕೆ ಉತ್ತರವಾಗಿ ಯುವ ಬ್ಯಾಟರ್ ನಾಥನ್ ಮೆಕ್‌ಸ್ವೀನಿ (38* ರನ್, 97 ಎಸೆತ, 6 ಬೌಂಡರಿ) ಹಾಗೂ ಅನುಭವಿ ಮಾರ್ನಸ್ ಲಬುಶೇನ್ (20* ರನ್,67 ಎಸೆತ, 3 ಬೌಂಡರಿ) ದಿಟ್ಟ ಜತೆಯಾಟದ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ದಿನದಾಟದ ಗೌರವ ಸಂಪಾದಿಸಿದೆ.

ರಾಹುಲ್‌ಗೆ ಅವಳಿ ಜೀವದಾನ

ಗಾಯದ ಸಮಸ್ಯೆಗೆ ತುತ್ತಾಗಿರುವ ಹ್ಯಾಸಲ್‌ವುಡ್ ಬದಲಿಗೆ 2023ರ ಬಳಿಕ ತವರಿನಲ್ಲಿ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿದಿರುವ ಬೋಲ್ಯಾಂಡ್‌ರ ಮೊದಲ ಎಸೆತವೇ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರುತ್ತಿದ್ದಂತೆ ರಾಹುಲ್ ಪೆವಿಲಿಯನ್‌ನತ್ತ ಮುಖ ಮಾಡಿದರು. ಕೊಹ್ಲಿ ಡಗೌಟ್‌ನಿಂದ ಕ್ರೀಸ್‌ಗೆ ಆಗಮಿಸಲು ಸಜ್ಜಾದರೆ, ಮೂರನೇ ಅಂಪೈರ್ ನೋಬಾಲ್ ಎಂದರು.

ಜತೆಗೆ 18 ಎಸೆತ ಎದುರಿಸಿ ರನ್‌ಗಳಿಸದ ರಾಹುಲ್ ಬ್ಯಾಟ್‌ಗೆ ಚೆಂಡು ಸ್ಪರ್ಶಿಸದೆ ಕೀಪರ್ ಕೈಸೇರಿರುವುದು ಖಾತ್ರಿಗೊಂಡಿತು. ಸ್ನಿಕೋಮೀಟರ್‌ನಲ್ಲಿಯೂ ಸ್ಪೈಕ್ ಕಾಣಿಸಲಿಲ್ಲ. ಜತೆಗೆ ರಾಹುಲ್ ಡಿಆರ್‌ಎಸ್ ಮೊರೆ ಹೋಗದಿರುವುದು ಅಚ್ಚರಿ ಮೂಡಿಸಿತು. ಆದರೆ ನೋಬಾಲ್‌ನಿಂದ ಬಚಾವಾದರು. ಅದೇ ಓವರ್‌ನ 5ನೇ ಎಸೆತದಲ್ಲಿ ಉಸ್ಮಾನ್ ಖವಾಜ ಸ್ಲಿಪ್‌ನಲ್ಲಿ ರಾಹುಲ್ ಕ್ಯಾಚ್ ಕೈಚೆಲ್ಲಿದರು. ಇದರ ಲಾಭ ಪಡೆಯದ ರಾಹುಲ್ 37 ರನ್‌ಗಳಿಸಲಷ್ಟೇ ಸಾಧ್ಯವಾಯಿತು.

ಕಪ್ಪುಪಟ್ಟಿ ಧರಿಸಿದ ಆಸೀಸ್

2014ರಲ್ಲಿ ತಲೆಗೆ ಚೆಂಡು ಬಡಿದು ದುರಂತ ಅಂತ್ಯ ಕಂಡ ಆಸೀಸ್‌ನ ಆರಂಭಿಕ ಬ್ಯಾಟರ್ ಫಿಲಿಪ್ ಹ್ಯೂಸ್ ಹಾಗೂ ಇತ್ತಿಚೇಗೆ ನಿಧನರಾದ ಮಾಜಿ ಕ್ರಿಕೆಟಿಗ ಇಯಾನ್ ರೆಡ್‌ಪಾತ್ ಅವರ ಗೌರವಾರ್ಥವಾಗಿ ಆಸ್ಟ್ರೇಲಿಯಾ ಆಟಗಾರರು ಅಡಿಲೇಡ್ ಟೆಸ್ಟ್‌ನಲ್ಲಿ ತೋಳುಗಳಿಗೆ ಕಪ್ಪು ಪಟ್ಟಿ ಧರಿಸಿ ಆಡಿದರು. ಹ್ಯೂಸ್ ನಿಧನರಾಗಿ 10 ವರ್ಷ ಪೂರೈಸಿದ ಹಿನ್ನೆಲೆ ಪಂದ್ಯದ ಆರಂಭಕ್ಕೂ ಮುನ್ನ ಅವರ ಜೀವನ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ದಾಖಲೆಯ ಹಾಜರಾತಿ

ಅಹರ್ನಿಶಿ ಟೆಸ್ಟ್‌ನ ಮೊದಲ ದಿನದಾಟವನ್ನು ದಾಖಲೆಯ ಸಂಖ್ಯೆಯ ಪ್ರೇಕ್ಷಕರು ಕಣ್ತುಂಬಿಕೊಂಡಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ. 53 ಸಾವಿರ ಆಸನ ಸಾಮಥ್ಯ ಹೊಂದಿರುವ ಅಡಿಲೇಡ್ ಓವಲ್ ಮೈದಾನದಲ್ಲಿ ಆರಂಭಗೊಂಡ ಪಂದ್ಯದ ವೀಕ್ಷಣೆಗೆ ಶುಕ್ರವಾರ 50,186 ಜನರು ಹಾಜರಿದ್ದರು. ಇದು ಅಡಿಲೇಡ್‌ನಲ್ಲಿ ಒಂದೇ ದಿನದಲ್ಲಿ ದಾಖಲೆಯ ಹಾಜರಾತಿ ಎನಿಸಿದೆ. 2011-12ರ ಸರಣಿಯಲ್ಲಿ ಭಾರತ ಹಾಗೂ ಆಸೀಸ್ ನಡುವಿನ ಪಂದ್ಯದಲ್ಲಿ 35,081 ಜನ ವೀಕ್ಷಿಸಿದ್ದು ಹಿಂದಿನ ದಾಖಲೆ. ಜತೆಗೆ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಪರ್ತ್ ಟೆಸ್ಟ್ ಒಟ್ಟಾರೆ 96,463 ಜನರಿಂದ ವೀಕ್ಷಿಸಲ್ಪಟ್ಟಿದೆ.

ರೋಹಿತ್, ಅಶ್ವಿನ್, ಗಿಲ್ ಕಂಬ್ಯಾಕ್

ಮೊದಲ ಟೆಸ್ಟ್ ಪಂದ್ಯ ವೇಳೆ ಪಿತೃತ್ವ ರಜೆ ಪಡೆದುಕೊಂಡಿದ್ದ ನಾಯಕ ರೋಹಿತ್ ಶರ್ಮ ಹಾಗೂ ಹೆಬ್ಬೆರಳು ಗಾಯದಿಂದ ಚೇತರಿಸಿಕೊಂಡು ಸಂಪೂರ್ಣವಾಗಿ ಫಿಟ್ ಆಗಿರುವ ಶುಭಮಾನ್ ಗಿಲ್ ಅಡಿಲೇಡ್ ಟೆಸ್ಟ್‌ಗೆ ಮರಳಿದರು. ಇವರಿಬ್ಬರಿಗೆ ದೇವದತ್ ಪಡಿಕ್ಕಲ್, ಧ್ರುವ ಜುರೆಲ್ ಸ್ಥಾನ ಬಿಟ್ಟುಕೊಟ್ಟರು. ಇನ್ನು ಅನುಭವಿ ಸ್ಪಿನ್ನರ್ ಆರ್.ಅಶ್ವಿನ್‌ಗೆ ಮಣೆ ಹಾಕಿದ ಭಾರತ, ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ರನ್ನು ಕೈಬಿಟ್ಟಿತು.