ಕ್ರೀಡೆ

ಈ ಒಬ್ಬ ಆಟಗಾರನಿಂದ ಆರ್​ಸಿಬಿಯ ಅದೃಷ್ಟವೇ ಬದಲಾಯ್ತು! ಸತತ ಗೆಲುವಿನ ಹಿಂದಿರುವ ಅದೃಷ್ಟವಂತನ್ಯಾರು?

ನವದೆಹಲಿ: ಪ್ರಸಕ್ತ ಐಪಿಎಲ್​ ಟೂರ್ನಿಯ ಆರಂಭದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಅತ್ಯಂತ ಕಳಪೆ ಪ್ರದರ್ಶನದೊಂದಿಗೆ ಎಲ್ಲರಿಂದಲೂ ಟೀಕೆಗೆ ಒಳಗಾಯಿತು. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಹೊರತುಪಡಿಸಿ, ಪ್ರಾರಂಭದಲ್ಲಿ ಯಾರೂ ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಇವರಿಬ್ಬರು ಎಷ್ಟೇ ಪ್ರದರ್ಶನ ನೀಡಿದರೂ ಆರ್‌ಸಿಬಿ ಗೆಲುವು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಉಳಿದ ಆಟಗಾರರ ವೈಫಲ್ಯವೇ ಇದಕ್ಕೆ ಕಾರಣವಾಗಿತ್ತು. ಆರ್​ಸಿಬಿ ಪ್ಲೇಆಫ್​ ಹಾದಿ ಕನಸಾಗಿ ಉಳಿಯಲಿದೆ ಅಂದುಕೊಳ್ಳುವಷ್ಟರಲ್ಲಿ ಕಳೆದೆರಡು ಪಂದ್ಯಗಳ ಗೆಲುವು ಆ ಆಸೆಯನ್ನು ಜೀವಂತವಾಗಿ ಇರಿಸಿದೆ. ಆರ್‌ಸಿಬಿ ಇದೀಗ ಅಸಾಮಾನ್ಯ ಪ್ರದರ್ಶನ ನೀಡುತ್ತಿದೆ.

ತನ್ನ ವಿನಾಶಕಾರಿ ಬ್ಯಾಟಿಂಗ್‌ನಿಂದಲೇ ಎಲ್ಲ ತಂಡಗಳನ್ನು ಭಯಭೀತಗೊಳಿಸಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಅದ್ಭುತ ಪ್ರದರ್ಶನದೊಂದಿಗೆ ಆರ್​ಸಿಬಿ ಸತತ ಎರಡು ಗೆಲುವು ಸಾಧಿಸಿದೆ. ಒಳ್ಳೆಯದಾದಾಗ ಕೆಲವೊಮ್ಮೆ ಕೆಲವರ ಕಾಲ್ಗುಣ ಅಂತಾರಲ್ಲ ಅದು ಕೂಡ ಆರ್​ಸಿಬಿ ವಿಚಾರದಲ್ಲಿ ನಿಜವಾಗಿದೆ. ಏಕೆಂದರೆ, ಆ ಒಬ್ಬ ಆಟಗಾರನ ಆಗಮನದಿಂದಾಗಿ ಆರ್​ಸಿಬಿಗೆ ಒಂದರ ಹಿಂದಂತೆ ಎರಡು ಯಶಸ್ಸುಗಳು ಲಭಿಸಿವೆ. ಆರ್​​ಸಿಬಿ ತಂಡಕ್ಕೆ ಅದೃಷ್ಟವೂ ಬಂದಿದೆ ಎಂದು ಹೇಳಲಾಗುತ್ತಿದೆ. ನಾವೀಗ ಆ ಕ್ರಿಕೆಟಿಗ ಯಾರು ಎಂಬುದನ್ನು ತಿಳಿಯೋಣ.

33 ವರ್ಷದ ಕ್ರಿಕೆಟಿಗ ಏಪ್ರಿಲ್ 25ರಂದು ಹೈದರಾಬಾದ್‌ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್​ಸಿಬಿ ತಂಡಕ್ಕೆ ಪಾದರ್ಪಣೆ ಮಾಡಿದರು. ಆ ಕ್ರಿಕೆಟಿಗನ ಹೆಸರು ಸ್ವಪ್ನಿಲ್ ಸಿಂಗ್. 2008 ರಿಂದ ಐಪಿಎಲ್‌ನಲ್ಲಿದ್ದರೂ, ಆರ್‌ಸಿಬಿ ಈ ದೇಶೀಯ ಹೀರೋಗೆ ಆಡಲು ಇದೇ ಮೊದಲ ಬಾರಿಗೆ ಅವಕಾಶ ನೀಡಿತು. ಎಸ್​ಆರ್​ಎಚ್​ ವಿರುದ್ಧದ ಪಂದ್ಯದೊಂದಿಗೆ ಸ್ವಪ್ನಿಲ್​ ಸಿಂಗ್​ ಅವರು ಆಟದ ಮೈದಾನವನ್ನು ಪ್ರವೇಶಿಸಿದರು.

ಆರ್​ಸಿಬಿ ಪರ ಮೊದಲ ಪಂದ್ಯ ಆಡುವಾಗ ಕೊನೆಯ ಓವರ್‌ನಲ್ಲಿ ಕೇವಲ 6 ಎಸೆತಗಳಲ್ಲಿ ಒಂದು ಸಿಕ್ಸರ್​ ಮತ್ತು ಒಂದು ಬೌಂಡರಿಯೊಂದಿಗೆ ಸ್ವಪ್ನಿಲ್​ ಸಿಂಗ್​ 12 ರನ್ ಗಳಿಸಿದರು. ಬೌಲಿಂಗ್​ನಲ್ಲೂ ಕಮಾಲ್​ ಮಾಡಿದರು. ತನ್ನ ಮೊದಲ ಓವರ್‌ನಲ್ಲಿ 19 ರನ್ ನೀಡಿದರು ಸಹ ಎರಡನೇ ಓವರ್​ನಲ್ಲಿ ಈಡನ್ ಮಾರ್ಕ್ರಾಮ್ ಮತ್ತು ಅಪಾಯಕಾರಿ ಹೆನ್ರಿಚ್ ಕ್ಲಾಸೆನ್ ಅವರನ್ನು ಔಟ್ ಮಾಡುವ ಮೂಲಕ ಆರ್​ಸಿಬಿ ಕಡೆ ವಿಜಯಲಕ್ಷ್ಮೀಯನ್ನು ಒಲಿಸಿದರು.

ನಿನ್ನೆ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್ ಬೌಲ್ ಮಾಡಿದ ಸ್ವಪ್ನಿಲ್​ ಸಿಂಗ್​, ಗುಜರಾತ್ ಟೈಟಾನ್ಸ್ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ ಅವರನ್ನು ಔಟ್ ಮಾಡುವ ಮೂಲಕ ಆರ್‌ಸಿಬಿಗೆ ಉತ್ತಮ ಆರಂಭ ನೀಡಿದರು. 3 ಓವರ್ ಬೌಲ್ ಮಾಡಿದ ಸ್ವಪ್ನಿಲ್ ಸಿಂಗ್ ಕೇವಲ 23 ರನ್ ನೀಡಿ ಒಂದು ವಿಕೆಟ್ ಕೂಡ ಪಡೆದರು.

ಇದೀಗ ಸ್ವಪ್ನಿಲ್ ಸಿಂಗ್ ಆಗಮನದಿಂದ ಆರ್‌ಸಿಬಿಗೆ ಅದೃಷ್ಟ ಬಂದಂತಾಗಿದೆ. ಸ್ವಪ್ನಿಲ್​ ಸಿಂಗ್​ಗೆ ಆರ್‌ಸಿಬಿ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. ಸಿಂಗ್​ ಮೊದಲೇ ಆಡಿದ್ದರೆ ಆರ್‌ಸಿಬಿ ಟೇಬಲ್‌ ಟಾಪರ್‌ ಆಗುತ್ತಿತ್ತು ಎನ್ನುತ್ತಿದ್ದಾರೆ. (ಏಜೆನ್ಸೀಸ್)