ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ಕಿಂಗ್ಸ್ ನಡುವಿನ ನಾಕೌಟ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯೂ 27 ರನ್ಗಳ ಭರ್ಜರಿ ಜಯ ಸಾಧಿಸಿದ್ದು, ಪ್ಲೇಆಫ್ ಪ್ರವೇಶಿಸಿದೆ. ಉಭಯ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಮತ್ತೊಮ್ಮೆ ಕಳಪೆ ಅಂಪೈರಿಂಗ್ ಕಂಡು ಬಂದಿದ್ದು, ಈ ಬಗ್ಗೆ ಕ್ರೀಡಾಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಅಂಪೈರ್ನ ವಿವಾದಾತ್ಮಕ ತೀರ್ಪಿನ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ಈ ವಿಚಾರವನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ.
ಆರ್ಸಿಬಿ ಬ್ಯಾಟಿಂಗ್ ವೇಳೆ ಮಿಚೆಲ್ ಸ್ಯಾಂಟ್ನರ್ ಎಸೆದ 13ನೇ ಓವರ್ನಲ್ಲಿ ರಜತ್ ಪಾಟೀದಾರ್ ಬಾರಿಸಿದ ಚೆಂಡು ಬೌಲರ್ ಕೈತಾಗಿ ನಾನ್ಸ್ಟ್ರೈಕ್ ಎಂಡ್ನಲ್ಲಿದ್ದ ಸ್ಟಂಪ್ಸ್ ತಾಗುತ್ತದೆ. ಈ ವೇಳೆ ಕ್ರೀಸ್ ಬಿಟ್ಟು ಒಂದು ಹೆಜ್ಜೆ ಮುಂದಿದ್ದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಕೂಡಲೇ ಹಿಂತಿರುಗಿ ತಮ್ಮ ಬ್ಯಾಟನ್ನು ಕ್ರೀಸ್ನೊಳಗೆ ಇರಿಸುತ್ತಾರೆ. ಇದನ್ನು ಪರಿಶೀಲಿಸುವಂತೆ ಆನ್ಫೀಲ್ಡ್ ಅಂಪೈರ್ ಥರ್ಡ್ ಅಂಪೈರ್ಗೆ ಮನವಿ ಮಾಡುತ್ತಾರೆ. ಇದನ್ನು ಪರಿಶೀಲಿಸಿದ ಥರ್ಡ್ ಅಂಪೈರ್ ಮೈಕೆಲ್ ಗೋಫ್ ಔಟ್ ಎಂದು ತೀರ್ಪು ನೀಡುತ್ತಾರೆ. ಮೂರನೇ ಅಂಪೈರ್ನ ಈ ತೀರ್ಪಿಗೆ ಆರ್ಸಿಬಿ ನಾಯಕ ಫಾಫ್ ಸೇರಿದಂತೆ ಸಹ ಆಟಗಾರರು ಅಸಮಾಧಾನ ಹೊರಹಾಕುತ್ತಾರೆ.
ವೈರಲ್ ಆಗಿರುವ ಫೋಟೋ ವಿಡಿಯೋ ನೋಡುವುದಾದರೆ ಫಾಫ್ ಡು ಪ್ಲೆಸಿಸ್ ಬ್ಯಾಟ್ ಕ್ರೀಸ್ನೊಳಗಿದ್ದು, ಅಂಪೈರ್ ಅದ್ಯಾವ ಮಾನದಂಡದ ಮೇಲೆ ಔಟೆಂದು ತೀರ್ಪು ನೀಡಿದರು ಎಂಬುದು ಈವರೆಗೆ ತಿಳಿದು ಬಂದಿಲ್ಲ. ಇತ್ತ ಐಪಿಎಲ್ನಲ್ಲಿ ಕಳಪೆ ಅಂಪೈರಿಂಗ್ ಪ್ರಕರಣ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಈ ವಿಚಾರವನ್ನು ಆರ್ಸಿಬಿ ಹಾಗೂ ಸಿಎಸ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಗಂಭೀರ ಕ್ರಮ ಕೈಗೊಳ್ಳುವಂತೆ ಕ್ರೀಡಾಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಮೇ 18ರಂದು ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ನಡುವಿನ ನಾಕೌಟ್ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯು 27 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪ್ಲೇಆಫ್ ಪ್ರವೇಶಿಸಿದ್ದು, ಮೇ 18 ಆರ್ಸಿಬಿ ಪಾಲಿಗೆ ಲಕ್ಕಿ ಡೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮೇ 22ರಂದು ಆರ್ಸಿಬಿ ಅಹಮದಾಬಾದಿನಲ್ಲಿ ಎಲಿಮಿನೇಟರ್ ಪಂದ್ಯವನ್ನು ಆಡಲಿದ್ದು, ಎದುರಾಳಿ ತಂಡ ಮೇ 19ರಂದು ನಡೆಯುವ ಡಬಲ್ ಹೆಡರ್ ಪಂದ್ಯದ ಬಳಿಕ ನಿರ್ಧಾರವಾಗಲಿದೆ.