RCB vs CSK: ಇಂದಿನ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಬದ್ಧ ವೈರಿ ತಂಡಗಳು ಗೆಲುವಿಗಾಗಿ ಚೆಪಾಕ್ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿದೆ. ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಆರ್ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೈದಾನಕ್ಕಿಳಿದ ಆರಂಭಿಕ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ಫಿಲಿಪ್ ಸಾಲ್ಟ್ ಉತ್ತಮ ಆರಂಭವನ್ನೇ ನೀಡಿದರು. ಮೊದಲೆರೆಡು ಓವರ್ಗಳಲ್ಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಸಾಲ್ಟ್, ಮಹೇಂದ್ರ ಸಿಂಗ್ ಧೋನಿ ಅವರ ವೇಗದ ಸ್ಟಂಪಿಂಗ್ಗೆ ವಿಕೆಟ್ ಕಳೆದುಕೊಂಡರು.
ಅದೇ ವೇಗ, ಅದೇ ನಿಖರತೆಯಲ್ಲಿ ಎರಡನೇ ಬಾರಿಗೆ ಮಿಂಚಿನ ಸ್ಟಂಪಿಂಗ್ ಮಾಡಿದ ಧೋನಿ, ಸಾಲ್ಟ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಕ್ಷಣಮಾತ್ರದಲ್ಲಿ ಸಾಲ್ಟ್ ವಿಕೆಟ್ ಪತನಗೊಂಡಿದ್ದನ್ನು ಕಂಡ ಆರ್ಸಿಬಿ ಅಭಿಮಾನಿಗಳು ಮೊದಲಿಗೆ ಇದು ಔಟ್ ಅಲ್ಲ ಎಂದೇ ಭಾವಿಸಿದರು. ಆದರೆ, ಎಲ್ಇಡಿ ಸ್ಕ್ರೀನ್ನಲ್ಲಿ ತೋರಿಸಿದ ಮಂದಗತಿಯ ಸ್ಟಂಪಿಂಗ್ ದೃಶ್ಯ ನೋಡಿದ ಬಳಿಕ ಒಪ್ಪಿಕೊಂಡರು.
ಅಸಲಿಗೆ ಮೇಲ್ನೋಟಕ್ಕೆ ಧೋನಿ ಸ್ಟಂಪಿಂಗ್ ಮಾಡುವ ಮುನ್ನ ಸಾಲ್ಟ್ ಕಾಲು ಕ್ರೀಸ್ನೊಳಗೆ ಇತ್ತು. ಆದ್ರೆ, ಧೋನಿ ಗ್ಲೌಸ್ ವಿಕೆಟ್ಗೆ ತಗಲುವ ವೇಳೆ ಕಾಲು ಗಾಳಿಯಲ್ಲಿತ್ತು. ಇದು ಆರ್ಸಿಬಿಯ ಆರಂಭಿಕ ಸ್ಫೋಟಕ ಬ್ಯಾಟರ್ ವಿಕೆಟ್ ಉರುಳಲು ಬಲವಾದ ಕಾರಣವಾಯಿತು. ಒಟ್ಟಿನಲ್ಲಿ ತಮಗೆ ಇನ್ನೂ ವಯಸ್ಸಾಗಿಲ್ಲ. ಮುಂದಿನ 2-3 ವರ್ಷ ಐಪಿಎಲ್ ಆಡಬಹುದು ಎಂಬ ಸಂದೇಶವನ್ನು ಕ್ಯಾಪ್ಟನ್ ಕೂಲ್ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ರವಾನಿಸಿದ್ದಾರೆ.