RCB : ಕಳೆದ 17 ವರ್ಷಗಳ ವನವಾಸದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೊದಲ ಬಾರಿ ಐಪಿಎಲ್ ಟ್ರೋಫಿ ಜಯಿಸಿದೆ. ಸಾಕಷ್ಟು ಅವಮಾನ, ಟ್ರೊಲ್ ಎಲ್ಲವನ್ನು ಸಹಿಸಿಕೊಂಡ ಆರ್‌ಸಿಬಿ ಐಪಿಎಲ್ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂನ್ 04) ವಿಧಾನಸೌಧದಲ್ಲಿ ಸನ್ಮಾನಿಸಲಿದ್ದಾರೆ.
ಆರ್‌ಸಿಬಿ ತಂಡಕ್ಕೆ ಸರ್ಕಾರದಿಂದ ಸನ್ಮಾನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಇಂದು ವಿಧಾನಸೌಧದ ಒಳಗೆ ಪ್ರವೇಶವಿಲ್ಲ. ಪಾಸ್ ಇದ್ದವರಿಗೆ ಮಾತ್ರ ವಿಧಾನಸೌಧಕ್ಕೆ ಎಂಟ್ರಿ ಸಿಗಲಿದೆ. ಇಂದು ಮಧ್ಯಾಹ್ನ 1.30ಕ್ಕೆ ಅಹಮದಬಾದ್ನಿಂದ ಬೆಂಗಳೂರಿಗೆ ಬಂದಿಳಿಯಲಿರುವ ಆರ್‌ಸಿಬಿ ತಂಡ ನೇರವಾಗಿ ತಾಜ್ ವೆಸ್ಟೆಂಡ್ ಹೋಟೆಲ್ಗೆ ತೆರಳಲಿದೆ. ಬಳಿಕ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಭೋಜನ ಕೂಟದಲ್ಲಿ ಭಾಗವಹಿಸಲಿದೆ.
ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಆರ್‌ಸಿಬಿ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಲಿದ್ದಾರೆ. ಅದಕ್ಕಾಗಿ ವಿಧಾನಸೌಧದ ಮೆಟ್ಟಿಲುಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಬಳಿಕ ಆರ್‌ಸಿಬಿ ತಂಡ ತೆರೆದ ಬಸ್ನಲ್ಲಿ ವಿಜಯೋತ್ಸವ ಮೆರವಣಿಗೆ ಆರಂಭಿಸಲಿದೆ. ವಿಧಾನಸೌಧದಿಂದ ಆರಂಭವಾಗಲಿರುವ ವಿಕ್ಟರಿ ಪರೇಡ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಿದೆ. ಸಂಜೆ 6 ಗಂಟೆಯಿಂದ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಇಂದು ಇಡೀ ಬೆಂಗಳೂರು ಕೆಂಪು ಬಣ್ಣದಿಂದ ಕಂಗೊಳಿಸಲಿದ್ದು, ನಗರದಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ವಿಕ್ಟರಿ ಪರೇಡ್ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾಕಷ್ಟು ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದು, ಸಂಜೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಇರಲಿದೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಪಂಜಾಬ್ ಪರ ಶಶಾಂಕ್ ಸಿಂಗ್ (ಅಜೇಯ 61 ರನ್, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್)