ಕ್ರೀಡೆ

ಯುಪಿ ವಾರಿಯರ್ಸ್ ಎದುರು ಸೂಪರ್​ ಓವರ್​ನಲ್ಲಿ ಮುಗ್ಗರಿಸಿದ ಆರ್​ಸಿಬಿ; ಎಲ್ಲಿಸ್​ ಪೆರ್ರಿ ಪರಿಶ್ರಮ ವ್ಯರ್ಥ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆಸೀಸ್​ ತಾರೆ ಎಲ್ಲಿಸ್​ ಪೆರ್ರಿ (90*ರನ್​, 56 ಎಸೆತ, 9 ಬೌಂಡರಿ, 3 ಸಿಕ್ಸರ್​, 10ಕ್ಕೆ 1 ವಿಕೆಟ್​) ಆಲ್ರೌಂಡ್​ ಆಟದ ನಡುವೆಯೂ ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವುಮೆನ್ಸ್​ ಪ್ರೀಮಿಯರ್​ ಲೀಗ್​ 3ನೇ ಆವೃತ್ತಿಯಲ್ಲಿ ಯುಪಿ ವಾರಿಯರ್ಸ್​ ಎದುರು ಸೂಪರ್​ ಓವರ್​ನಲ್ಲಿ 4 ರನ್​ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಸ್ಮೃತಿ ಮಂದನಾ ಪಡೆ ತವರು ಅಂಗಣದಲ್ಲಿ ಸತತ 2ನೇ ಬಾರಿ ನಿರಾಸೆ ಅನುಭವಿಸಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಆರ್​ಸಿಬಿ ತಂಡ ಪೆರ್ರಿ ಮತ್ತು ಡ್ಯಾನಿ ವ್ಯಾಟ್​&ಹಾಡ್ಜ್​ (57 ರನ್​, 41 ಎಸೆತ, 4 ಬೌಂಡರಿ, 3 ಸಿಕ್ಸರ್​) ಭರ್ಜರಿ ಬ್ಯಾಟಿಂಗ್​ನಿಂದ 6 ವಿಕೆಟ್​ಗೆ 180 ರನ್​ ಕಲೆಹಾಕಿತು. ಪ್ರತಿಯಾಗಿ ಯುಪಿ ಕೊನೇ ಎಸೆತದಲ್ಲಿ 180 ರನ್​ಗಳಿಗೆ ಸರ್ವಪತನ ಕಂಡು ಟೈ ಸಾಧಿಸಿತು. ಇದು ಡಬ್ಲ್ಯುಪಿಎಲ್​ನಲ್ಲಿ ಮೊಟ್ಟಮೊದಲ ಟೈ ಆಗಿದೆ. ನಂತರ ಸೂಪರ್​ ಓವರ್​ನಲ್ಲಿ ಯುಪಿ 1 ವಿಕೆಟ್​ಗೆ 7 ರನ್​ ಗಳಿಸಿದರೆ, ಆರ್​ಸಿಬಿ ವಿಕೆಟ್​ ನಷ್ಟವಿಲ್ಲದೆ 4 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕೊನೇ ಓವರ್​ನಲ್ಲಿ ರೋಚಕ ಟೈ

ಕೊನೇ ಓವರ್​ನಲ್ಲಿ ಯುಪಿಗೆ 18 ರನ್​ ಬೇಕಿದ್ದಾಗ ಎಕ್ಲೆಸ್ಟೋನ್​, ವೇಗಿ ರೇಣುಕಾ ಸಿಂಗ್​ ಎಸೆದ 2,3ನೇ ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿದರೆ, 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಕೊನೇ 2 ಎಸೆತಗಳಲ್ಲಿ 2 ರನ್​ ಬೇಕಿದ್ದಾಗ, 5ನೇ ಎಸೆತದಲ್ಲಿ ಸಿಂಗಲ್ಸ್​ ಕಸಿದರು. ಕೊನೇ ಎಸೆತದಲ್ಲಿ ಚೆಂಡು ಕ್ರಾಂತಿ ಗೌಡ್​ ಬ್ಯಾಟ್​ಗೆ ಸಿಗಲಿಲ್ಲ. ಎಕ್ಲೆಸ್ಟೋನ್​ ಬೈಸ್​ ರನ್​ ಕದಿಯಲು ಯತ್ನಿಸಿದಾಗ ಕೀಪರ್​ ರಿಚಾ ಘೋಷ್​ ರನೌಟ್​ ಮಾಡಿದ್ದರಿಂದ ಪಂದ್ಯ ಟೈ ಆಯಿತು.

ಆರ್​ಸಿಬಿ: 5 ವಿಕೆಟ್​ಗೆ 180 (ಸ್ಮ$ತಿ 6, ವ್ಯಾಟ್​ 57, ಪೆರ್ರಿ 90*, ರಿಚಾ 8, ಕನಿಕಾ 5, ವೇರ್​ಹ್ಯಾಂ 8, ಹೆನ್ರಿ 34ಕ್ಕೆ 1, ದೀಪ್ತಿ 42ಕ್ಕೆ 1, ತಹ್ಲಿಯಾ 30ಕ್ಕೆ 1). ಯುಪಿ ವಾರಿಯರ್ಸ್​: 20 ಓವರ್​ಗಳಲ್ಲಿ 180 (ನವಿಗಿರೆ 24, ವೃಂದಾ 14, ದೀಪ್ತಿ 25, ಶ್ವೇತಾ 31, ಗ್ರೇಸ್​ 8, ಉಮಾ 14, ಎಕ್ಲೆಸ್ಟೋನ್​ 33, ಸ್ನೇಹಾ 27ಕ್ಕೆ 3, ರೇಣುಕಾ 36ಕ್ಕೆ 2, ಗಾರ್ತ್​ 40ಕ್ಕೆ 2, ಪೆರ್ರಿ 10ಕ್ಕೆ 1).

ಸೂಪರ್​ ಓವರ್​: ಯುಪಿ ವಾರಿಯರ್ಸ್​ (ಬೌಲರ್​: ಗಾರ್ತ್​): 1 ವಿಕೆಟ್​ಗೆ 8 (ಹೆನ್ರಿ 4).

ಆರ್​ಸಿಬಿ (ಬೌಲರ್​: ಎಕ್ಲೆಸ್ಟೋನ್​): ವಿಕೆಟ್​ ನಷ್ಟವಿಲ್ಲದೆ 4 (ರಿಚಾ 2, ಸ್ಮೃತಿ 2).