ಕ್ರೀಡೆ

ಸಿಎಸ್​ಕೆ, ಮುಂಬೈ ಹಿಂದಿಕ್ಕಿದ ಬೆಂಗಳೂರು ಟೀಮ್​: ಐಪಿಎಲ್​ ಬ್ರ್ಯಾಂಡ್​ ಮೌಲ್ಯವೂ ಏರಿಕೆ

ನವದೆಹಲಿ: ಬರೋಬ್ಬರಿ 18ನೇ ಆವೃತ್ತಿಯಲ್ಲಿ ಮೊಟ್ಟಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿರುವ ಆರ್​ಸಿಬಿ ತಂಡವೀಗ ಐದು ಬಾರಿಯ ಚಾಂಪಿಯನ್​ಗಳಾದ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳನ್ನು ಹಿಂದಿಕ್ಕಿ ಐಪಿಎಲ್​ ಟೂರ್ನಿಯ ಅತ್ಯಂತ ಮೌಲ್ಯಯುತ ತಂಡ ಎನಿಸಿದೆ.

ಐಪಿಎಲ್​ ಚಾಂಪಿಯನ್​ ಪಟ್ಟ ಏರುವುದರೊಂದಿಗೆ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಒಳಗೊಂಡ ಆರ್​ಸಿಬಿ ತಂಡದ ಮೌಲ್ಯ ಶೇ.13.8 ಏರಿಕೆಯಾಗಿ, 2,307 ಕೋಟಿ ರೂ. (269 ದಶಲಕ್ಷ ಡಾಲರ್​) ತಲುಪಿದೆ. ಇದರೊಂದಿಗೆ ಐಪಿಎಲ್​ ಟೂರ್ನಿಯ ಬ್ರ್ಯಾಂಡ್​ ​ ಮೌಲ್ಯವೂ ಶೇ.12.9 ಏರಿಕೆಯಾಗಿದ್ದು, 1.58 ಲಕ್ಷ ಕೋಟಿ ರೂಪಾಯಿ (18.5 ಶತಕೋಟಿ ಡಾಲರ್​) ಮುಟ್ಟಿದೆ.

ಜಾಗತಿಕ ಹೂಡಿಕೆ ಬ್ಯಾಂಕ್​ "ಹೌಲಿಹಾನ್​ ಲೋಕಿ' ಇತ್ತೀಚೆಗೆ ನಡೆಸಿರುವ ಐಪಿಎಲ್​ ಬ್ರ್ಯಾಂಡ್​ ​ ಮೌಲ್ಯಮಾಪನ ಅಧ್ಯಯನದ ಪ್ರಕಾರ, ಕಳೆದ ಆವೃತ್ತಿಯ ಟೂರ್ನಿಗೆ ದೊಡ್ಡ ಮೊತ್ತದ ಪ್ರಾಯೋಜಕತ್ವ ಲಭಿಸಿತ್ತು. 4 ಅಸೋಸಿಯೇಟ್​ ಪ್ರಾಯೋಜಕರಿಂದಲೇ 1,485 ಕೋಟಿ ರೂ. ಲಭಿಸಿತ್ತು. ಇದು ಕಳೆದ ಆವೃತ್ತಿಗಿಂತ ಶೇ.25 ಅಧಿಕವಾಗಿದೆ. ಟಾಟಾ ಗ್ರೂಪ್​ ಜತೆಗಿನ ಶೀರ್ಷಿಕೆ ಪ್ರಾಯೋಜಕತ್ವವೂ 2,572 ಕೋಟಿ ರೂ. ಗೆ 2028ರವರೆಗೆ ವಿಸ್ತರಣೆಯಾಗಿದೆ. 2025ರಲ್ಲಿ ಟೂರ್ನಿಯ ವೀಕ್ಷಕರ ಸಂಖ್ಯೆಯೂ ಏರಿಕೆಯಾಗಿದೆ. ಆರ್​ಸಿಬಿ-ಪಂಜಾಬ್​ ನಡುವಿನ ಫೈನಲ್​ ಪಂದ್ಯ 67.8 ಕೋಟಿ ವೀಕ್ಷಣೆ ಕಂಡಿತ್ತು.

ಆರ್​ಸಿಬಿ ಕಳೆದ ಆವೃತ್ತಿಯ ನಂತರ 1,946 ಕೋಟಿ ರೂ. ಬ್ರ್ಯಾಂಡ್​ ಮೌಲ್ಯದೊಂದಿಗೆ ಐಪಿಎಲ್​ ತಂಡಗಳಲ್ಲಿ 2ನೇ ಸ್ಥಾನದಲ್ಲಿತ್ತು. ಆದರೆ "ಈ ಸಲ ಕಪ್​ ನಮ್ದೇ' ಘೋಷವಾಕ್ಯ ನಿಜವಾಗುವುದರೊಂದಿಗೆ ಆರ್​ಸಿಬಿ, 350ಕ್ಕೂ ಅಧಿಕ ಕೋಟಿ ರೂ. ಬ್ರ್ಯಾಂಡ್​ ಮೌಲ್ಯ ಹೆಚ್ಚಿಸಿಕೊಂಡು ಅಗ್ರಸ್ಥಾನಕ್ಕೇರಿದೆ. ಚೆನ್ನೈ ಸೂಪರ್​ಕಿಂಗ್ಸ್​ (₹2,015 ಕೋಟಿ) ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮುಂಬೈ ಇಂಡಿಯನ್ಸ್​ (₹2,075 ಕೋಟಿ) 4ರಿಂದ 2ನೇ ಸ್ಥಾನಕ್ಕೇರಿದೆ. 3 ಬಾರಿಯ ಚಾಂಪಿಯನ್​ ಕೋಲ್ಕತ ನೈಟ್​ರೈಡರ್ಸ್​ (₹1,947 ಕೋಟಿ) 3ರಿಂದ 4ನೇ ಸ್ಥಾನಕ್ಕೆ ಕುಸಿದಿದೆ.

ಪಂಜಾಬ್​ ಗರಿಷ್ಠ ಪ್ರಗತಿ: ಬಾಲಿವುಡ್​ ನಟಿ ಪ್ರೀತಿ ಝಿಂಟಾ ಸಹ-ಮಾಲೀಕತ್ವದ ಪಂಜಾಬ್​ ಕಿಂಗ್ಸ್​ ತಂಡ ಈ ಬಾರಿ ಶ್ರೇಯಸ್​ ಅಯ್ಯರ್​ ಸಾರಥ್ಯದೊಂದಿಗೆ ಐಪಿಎಲ್​ನಲ್ಲಿ 11 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿ ರನ್ನರ್​ಅಪ್​ ಸ್ಥಾನ ಗಳಿಸುವುದರೊಂದಿಗೆ ಸರ್ವಾಧಿಕ ಶೇ.39.6 ​ ಮೌಲ್ಯ ವೃದ್ಧಿಸಿಕೊಂಡಿದೆ. ಪಂಜಾಬ್​ ಈಗ ₹1,209 ಕೋಟಿ ಬ್ರ್ಯಾಂಡ್​ ​ ಮೌಲ್ಯ ಪಡೆದುಕೊಂಡಿದೆ.

ಪಿಎಲ್​ ತಂಡಗಳ ಹಾಲಿ ಬ್ರ್ಯಾಂಡ್​ ​ ಮೌಲ್ಯ

ಆರ್​ಸಿಬಿ-ಬೆಂಗಳೂರು: ₹2,307 ಕೋಟಿ

ಮುಂಬೈ ಇಂಡಿಯನ್ಸ್​: ₹2,075 ಕೋಟಿ

ಚೆನ್ನೈ ಸೂಪರ್​ಕಿಂಗ್ಸ್​: ₹2,015 ಕೋಟಿ

ಕೋಲ್ಕತ ನೈಟ್​ರೈಡರ್ಸ್​: ₹1,947 ಕೋಟಿ

ಸನ್​ರೈಸರ್ಸ್​ ಹೈದರಾಬಾದ್​: ₹1,320 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್​: ₹1,303 ಕೋಟಿ

ರಾಜಸ್ಥಾನ ರಾಯಲ್ಸ್​: ₹1,252 ಕೋಟಿ

ಗುಜರಾತ್​ ಟೈಟಾನ್ಸ್​: ₹1,217 ಕೋಟಿ

ಪಂಜಾಬ್​ ಕಿಂಗ್ಸ್​: ₹1,209 ಕೋಟಿ

 ಲಖನೌ ಸೂಪರ್​ಜೈಂಟ್ಸ್​: ₹1,046 ಕೋಟಿ