ಕ್ರೀಡೆ

ಹ್ಯಾಟ್ರಿಕ್​ ಗೆಲುವಿನ ಹುರುಪಿನಲ್ಲಿ ಆರ್​ಸಿಬಿ; ಇಂದು ಗುಜರಾತ್​ ಎದುರಾಳಿ; ಪ್ಲೆಸಿಸ್​ ಪಡೆಗೆ 18 ದಿನಗಳ ಬಳಿಕ ತವರಿನಲ್ಲಿ ಪಂದ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಗಣಿತಶಾಸ್ತ್ರದ ಪ್ರಕಾರ ಇನ್ನೂ ಪ್ಲೇಆ್​ ಅವಕಾಶ ಉಳಿಸಿಕೊಂಡಿರುವ ತಂಡಗಳಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಹಾಲಿ ರನ್ನರ್​ಅಪ್​ ಗುಜರಾತ್​ ಟೈಟಾನ್ಸ್​ ತಂಡಗಳು ಐಪಿಎಲ್​-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ. ಲೋಕಸಭಾ ಚುನಾವಣೆಯ ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್​ಸಿಬಿ ಇದೀಗ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ. ಕಳೆದ ಭಾನುವಾರವಷ್ಟೇ ಉಭಯ ತಂಡಗಳ ನಡುವೆ ಅಹಮದಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿರುವ ಫಾಫ್​ ಡು ಪ್ಲೆಸಿಸ್​ ಪಡೆ ಅದೇ ಫಲಿತಾಂಶ ಪುನರಾವರ್ತಿಸುವ ಹರುಪಿನಲ್ಲಿದ್ದರೆ, ಗುಜರಾತ್​ ಟೈಟಾನ್ಸ್​ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಆರಂಭಿಕ 8 ಪಂದ್ಯಗಳಲ್ಲಿ 7ರಲ್ಲಿ ಸೋತು ಪ್ಲೇಆ್​ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಆರ್​ಸಿಬಿ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಟೂರ್ನಿಯಿಂದ ತನ್ನ ಅಧಿಕೃತ ನಿರ್ಗಮನವನ್ನು ಇನ್ನೂ ಕೆಲ ದಿನಗಳ ಕಾಲ ಮುಂದೂಡಿದೆ. ಇದೀಗ ಗೆಲುವಿನ ಹ್ಯಾಟ್ರಿಕ್​ ಸಾಧಿಸುವುದು ಆರ್​ಸಿಬಿ ಛಲವಾಗಿದೆ. ಈ ಬಾರಿ ತವರಿನ ಅನುಕೂಲವನ್ನೂ ಹೊಂದಿದೆ. ಆದರೆ ತವರಿನಲ್ಲಿ ಆಡಿದ ಆರಂಭಿಕ 4 ಪಂದ್ಯಗಳಲ್ಲಿ ಪ್ಲೆಸಿಸ್​ ಪಡೆ 1ರಲ್ಲಿ ಮಾತ್ರ ಸೋತಿತ್ತು.

ಗುಜರಾತ್​ ಟೈಟಾನ್ಸ್​ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲಿನೊಂದಿಗೆ ಪ್ಲೇಆ್​ ರೇಸ್​ನಲ್ಲಿ ತೂಗುಯ್ಯಾಲೆಯ ಮೇಲೆ ನಿಂತಿದೆ. ಇನ್ನೊಂದು ಪಂದ್ಯ ಸೋತರೂ, ಗುಜರಾತ್​ಗೆ ಪ್ಲೇಆ್​ ಪ್ರವೇಶದ ಬಾಗಿಲು ಬಹುತೇಕ ಮುಚ್ಚಿ ಹೋಗಲಿದೆ.

ವಿಶ್ವಾಸದಲ್ಲಿ ಆರ್​ಸಿಬಿ

ಸನ್​ರೈಸರ್ಸ್​ ಮತ್ತು ಗುಜರಾತ್​ ವಿರುದ್ಧ ಕಳೆದೆರಡು ಪಂದ್ಯಗಳಲ್ಲಿ ಕಂಡ ಜಯ ಆರ್​ಸಿಬಿ ತಂಡದ ವಿಶ್ವಾಸ ವೃದ್ಧಿಸಿದೆ. ವಿರಾಟ್​ ಕೊಹ್ಲಿ ಅವರ ಬ್ಯಾಟಿಂಗ್​ ಹೋರಾಟಕ್ಕೆ ಕಳೆದ ಪಂದ್ಯದಲ್ಲಿ ವಿಲ್​ ಜಾಕ್ಸ್​ ಸ್ಫೋಟಕ ಆಟದ ಬೆಂಬಲವೂ ಲಭಿಸಿದೆ. ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಕೆಲ ಪಂದ್ಯಗಳ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದಿದ್ದರೆ, 17 ಕೋಟಿ ರೂ.ಗೆ ತಂಡಕ್ಕೆ ವರ್ಗಾವಣೆಗೊಂಡಿರುವ ಕ್ಯಾಮರಾನ್​ ಗ್ರೀನ್​ ಕೊನೆಗೂ ಆಲ್ರೌಂಡ್​ ನಿರ್ವಹಣೆಯೊಂದಿಗೆ ತಂಡದ ಬಲ ಹೆಚ್ಚಿಸಲಾರಂಭಿಸಿದ್ದಾರೆ. ಆರ್​ಸಿಬಿ ಪರ ನೀರಸ ನಿರ್ವಹಣೆಯ ನಡುವೆಯೂ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿರುವ ವೇಗಿ ಮೊಹಮದ್​ ಸಿರಾಜ್​ ಈ ಆಯ್ಕೆಯನ್ನೀಗ ಸಮರ್ಥಿಸಿಕೊಳ್ಳಬೇಕಿದೆ. ಯಶ್​ ದಯಾಳ್​, ಕರ್ಣ್​ ಶರ್ಮ, ಸ್ವಪ್ನಿಲ್​ ಸಿಂಗ್​ ಸ್ಥಿರ ನಿರ್ವಹಣೆ ತೋರಬೇಕಿದೆ.

ಒತ್ತಡದಲ್ಲಿ ಗುಜರಾತ್​

ಕಳೆದ 2 ಪಂದ್ಯಗಳಲ್ಲಿ ಡೆಲ್ಲಿ ಮತ್ತು ಆರ್​ಸಿಬಿ ವಿರುದ್ಧ 200 ಪ್ಲಸ್​ ಮೊತ್ತ ಪೇರಿಸಿಯೂ ಸೋತಿರುವ ಗುಜರಾತ್​ ತಂಡವೀಗ ಹ್ಯಾಟ್ರಿಕ್​ ಸೋಲಿನ ಭೀತಿಯಲ್ಲಿದೆ. ಶುಭಮಾನ್​ ಗಿಲ್​ ಮತ್ತು ಸಾಯಿ ಸುದರ್ಶನ್​ ಒಟ್ಟಾರೆ 700ಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಆದರೆ ಇತರ ಯಾವ ಬ್ಯಾಟರ್​ ಕೂಡ 200ಕ್ಕಿಂತ ಅಧಿಕ ರನ್​ ಗಳಿಸಿಲ್ಲ. ಬೌಲಿಂಗ್​ ವಿಭಾಗದಲ್ಲಿ ರಶೀದ್​ ಖಾನ್​ ಸಹಿತ ಎಲ್ಲರ ನಿರ್ವಹಣೆ ನೀರಸವೆನಿಸಿದೆ. ರಶೀದ್​ 10 ಪಂದ್ಯಗಳಲ್ಲಿ 8 ವಿಕೆಟ್​ ಮಾತ್ರ ಗಳಿಸಿದ್ದಾರೆ. ಅನುಭವಿ ವೇಗಿಗಳಾದ ಉಮೇಶ್​ ಯಾದವ್​, ಮೋಹಿತ್​ ಶರ್ಮ ಕೂಡ ಇತ್ತೀಚೆಗೆ ದುಬಾರಿ ಎನಿಸಿದ್ದಾರೆ.

ಮಳೆ ಭೀತಿ

ಉದ್ಯಾನನಗರಿಯಲ್ಲಿ ಕಳೆದ 2 ದಿನಗಳಿಂದ ಮಳೆಯಾಗುತ್ತಿದ್ದು, ಶನಿವಾರವೂ ಮುಂದುವರಿಯುವ ನಿರೀೆ ಇದೆ. ಹೀಗಾಗಿ ಪಂದ್ಯ ಮಳೆ ಅಡಚಣೆಗೆ ಒಳಗಾಗುವ ಭೀತಿ ಇದೆ. ಆದರೆ, ಓವರ್​ ಕಡಿತಗೊಂಡರೂ, ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಪಂದ್ಯ ರದ್ದಾದರೆ ಆರ್​ಸಿಬಿ 1 ಅಂಕ ಹಂಚಿಕೊಂಡರೂ, ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಮುಖಾಮುಖಿ: 4

ಆರ್​ಸಿಬಿ: 2

ಗುಜರಾತ್​: 2

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋಸಿನಿಮಾ.