ಕ್ರೀಡೆ

ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ಆರ್‌ಸಿಬಿ-ಗುಜರಾತ್ ಹಣಾಹಣಿ

ಬೆಂಗಳೂರು: ತವರಿನಲ್ಲಿ ಸತತ ಎರಡು ಸೋಲು ಅನುಭವಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (ಡಬ್ಲುೃಪಿಎಲ್) ಗುರುವಾರ ಗುಜರಾತ್ ಜೈಂಟ್ಸ್ ಎದುರು ಕಣಕ್ಕಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ನಿರಾಸೆ ಕಂಡಿರುವ ಸ್ಮತಿ ಮಂದನಾ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ.

ಸತತ 2 ಗೆಲುವಿನೊಂದಿಗೆ ಟೂರ್ನಿಯಲ್ಲಿ ಭರ್ಜರಿ ಆರಂಭ ಕಂಡ ಆರ್‌ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ. ಜತೆಗೆ ತವರಿನದ ಚಿನ್ನಸ್ವಾಮಿ ಅಂಗಣದಲ್ಲಿ ಈ ಸೋಲು ಎದುರಾಗಿರುವುದು ಹಿನ್ನಡೆ ಎನಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಎದುರು 200ಪ್ಲಸ್ ರನ್ ಚೇಸಿಂಗ್ ನಡೆಸಿರುವ ಆತ್ಮವಿಶ್ವಾಸದಲ್ಲಿರುವ ಆರ್‌ಸಿಬಿ ಲಯಕ್ಕೆ ಮರಳುವ ಸಾಧ್ಯತೆಗಳಿವೆ. ಡ್ಯಾನಿ ವ್ಯಾಟ್ ಹಡ್ಜ್ ಹಾಗೂ ಎಲ್ಲಿಸ್ ಪೆರ‌್ರಿ ಉತ್ತಮ ಾರ್ಮ್‌ನಲ್ಲಿದ್ದು, ಸ್ಮತಿ ಮಂದನಾ ಬಲ ತುಂಬಬೇಕಿದೆ. ಪೆರ‌್ರಿ ಬೌಲಿಂಗ್‌ಗೆ ಮರಳಿರುವುದು ಆರ್‌ಸಿಬಿ ಹೆಚ್ಚಿನ ಶಕ್ತಿ ನೀಡಿದೆ, ಆದರೆ ಬೌಲರ್‌ಗಳ ಅಸ್ಥಿರತೆ ನಿರ್ವಹಣೆ ಸಮಸ್ಯೆ ಎನಿಸಿದೆ. ರೇಣುಕಾ ಸಿಂಗ್, ಕಿಮ್ ಗಾರ್ತ್ ಲಯ ಕಾಯ್ದುಕೊಳ್ಳುವಲ್ಲಿ ಎಡವಿದ್ದಾರೆ. ಜಾರ್ಜಿಹ್ಯಾ ವೇರ್‌ಹ್ಯಾಂಗೆ ಮಧ್ಯಮ ಓವರ್‌ಗಳಲ್ಲಿ ಏಕ್ತಾ ಬಿಷ್ಟ್, ಕನಿಕಾ ಆಹುಜಾ ಸೂಕ್ತ ಸಾಥ್ ನೀಡಲು ವಿಲರಾಗಿದ್ದಾರೆ. ಆರ್‌ಸಿಬಿ ಹ್ಯಾಟ್ರಿಕ್ ಸೋಲಿನಿಂದ ಪಾರಾಗುವ ಒತ್ತಡದಲ್ಲಿದೆ.

ಅಂಕಪಟ್ಟಿಯ ಕೊನೇ ಸ್ಥಾನದಲ್ಲಿ ಉಳಿದಿರುವ ಗುಜರಾತ್ ಜೆಂಟ್ಸ್ ಪರ ನಾಯಕಿ ಆಶ್ಲೇ ಗಾರ್ಡ್‌ನರ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ. ಜತೆಗೆ ಹಿಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಇದಾಗಿದೆ. ಡಿಯೆಂಡ್ರಾ ಡಾಟಿನ್ ಹಾಗೂ ಗಾರ್ಡ್‌ನರ್ ಆರ್‌ಸಿಬಿ ತಂಡಕ್ಕೆ ಸವಾಲೆನಿಸಿದ್ದಾರೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್