ಕ್ರೀಡೆ

ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿಕೊಟ್ಟ RCB ಫ್ಯಾನ್ಸ್! ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು

RCB : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿಯಲ್ಲಿ  ಆರ್​ಸಿಬಿ ಅಭಿಮಾನಿಗಳು ವಿರಾಟ್​ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ ನೀಡಿ ಹುಚ್ಚಾಟ ಮೆರೆದಿದ್ದಾರೆ. ಈ ಕುರಿತಾದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗುತ್ತಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಜಯಭೇರಿ ಬಾರಿಸಿತ್ತು.  ಸಿಎಸ್​ಕೆ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲುತ್ತಿದ್ದಂತೆ ಕೊಹ್ಲಿ ಬ್ಯಾನರ್ ಮುಂದೆ ಅಭಿಮಾನಿಗಳು, ಮೇಕೆ ಬಲಿಕೊಟ್ಟು ಸಂಭ್ರಮಿಸಿದ್ದಾರೆ. ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್​ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್​ಗೆ ರಕ್ತಾಭಿಷೇಕ ಮಾಡಿದ್ದಾರೆ. ಇದೇ ದೃಶ್ಯವನ್ನು ತಮ್ಮ ಫೋನ್​ನಲ್ಲಿ ಸೆರೆ ಮಾಡಿಕೊಂಡು call-me-143-kalki ಹೆಸರಿನ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಈ ವಿಡಿಯೋ ಸೋಶಿಯಲ್​​  ಮೀಡಿಯಾದಲ್ಲಿ ವೈರಲ್​​ ಆಗುತ್ತಿದ್ದಂತೆ ಕೂಡಲೇ ಮೂವರು ಯುವಕರಾದ ಸಣ್ಣ ಪಾಲಯ್ಯ, ಜಯ್ಯಣ್ಣ, ತಿಪ್ಪೇಸ್ವಾಮಿ ವಿರುದ್ದ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.