ಚಾಮರಾಜನಗರ: ಐಪಿಎಲ್ 13ನೇ ಆವೃತ್ತಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿಯಾದರೂ ಆರ್ಸಿಬಿ ತಂಡ ಕಪ್ ಗೆಲ್ಲಲೇಬೇಕೆಂದು ಆಶಿಸಿ ಅಭಿಮಾನಿಯೊಬ್ಬ ಮಾದಪ್ಪನ ಮೊರೆ ಹೋಗಿದ್ದಾನೆ.
ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ ನಡೆದ ಮಹಾರಥೋತ್ಸ ವದ ವೇಳೆ ಆರ್ಸಿಬಿ ತಂಡದ ಕಟ್ಟಾ ಅಭಿಮಾನಿಯಾಗಿರುವ ಹನೂರಿನ ರಘು ಎಂಬಾತ ಬಾಳೆ ಹಣ್ಣಿನ ಮೇಲೆ ‘ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಪ್ರಾರ್ಥನೆ ಸಲ್ಲಿಸಿದ್ದಾನೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ಸವದ ವೇಳೆ ಇಷ್ಟಾರ್ಥ ಸಿದ್ಧಿಗಾಗಿ ರಥೋತ್ಸವಕ್ಕೆ ಹಣ್ಣು-ದವನ ಎಸೆದು ಭಕ್ತಿ ಸಮರ್ಪಿಸುವುದು ಇಲ್ಲಿನ ವಾಡಿಕೆ. ಆರ್ಸಿಬಿ ಅಭಿಮಾನಿ ರಘು ಮಾದಪ್ಪನಿಗೆ ತನ್ನ ನೆಚ್ಚಿನ ತಂಡ ಗೆಲ್ಲಬೇಕೆಂದು ಸಲ್ಲಿಸಿರುವ ಕೋರಿಕೆ ಈಡೇರುವುದೇ ಎಂಬುದನ್ನು ಕಾದು ನೋಡಬೇಕಿದೆ.