ಸೆಂಚುರಿಯನ್: ಆರ್ಸಿಬಿ ತಂಡಕ್ಕೆ ಬರೀ ಬೆಂಗಳೂರು, ಕರ್ನಾಟಕ, ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ ಎಂಬುದು ಬುಧವಾರ ಸಾಬೀತುಗೊಂಡಿದೆ. ಸೆಂಚುರಿಯನ್ನಲ್ಲಿ ನಡೆಯುತ್ತಿರುವ ಆತಿಥೇಯ ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ಜೆರ್ಸಿಯೊಂದಿಗೆ ಆಗಮಿಸಿದ ಸ್ಥಳಿಯ ಬಾಲಕನೊಬ್ಬನಿಗೆ ಹಸ್ತಾಕ್ಷರ ನೀಡಿದ್ದು ವಿಶೇಷವಾಗಿತ್ತು.
ಆರ್ಸಿಬಿ ತಂಡದ ಜೆರ್ಸಿ ಮೇಲೆಯೇ ನನಗೆ ವಿರಾಟ್ ಕೊಹ್ಲಿ ಆಟೋಗ್ರಾಫ್ ಬೇಕೆಂದು ಆ ಬಾಲಕ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಹೀಗಾಗಿ ಭೋಜನ ವಿರಾಮದ ವೇಳೆ ವಿರಾಟ್ ಕೊಹ್ಲಿ ಆ ಬಾಲಕನ ಆಸೆ ಪೂರೈಸಿದರು.
ಕೊಹ್ಲಿ ಆರ್ಸಿಬಿ ಜೆರ್ಸಿ ಮೇಲೆ ಸಹಿ ಮಾಡಿ ಬಾಲಕನನ್ನು ಖುಷಿಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿ 2008ರ ಐಪಿಎಲ್ ಮೊದಲ ಆವೃತ್ತಿಯಿಂದಲೂ ಆರ್ಸಿಬಿ ತಂಡದಲ್ಲೇ ಇದ್ದು, ಐಪಿಎಲ್ನಲ್ಲಿ 17 ಆವೃತ್ತಿಗಳಲ್ಲೂ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರರೆನಿಸಿದ್ದಾರೆ.