ಕ್ರೀಡೆ

ಪದಾರ್ಪಣೆಯ ಟೆಸ್ಟ್ ಸರಣಿಯಲ್ಲಿ ಮಿಂಚಿದ ಆರ್‌ಸಿಬಿ ಯುವ ಬ್ಯಾಟರ್: ಗಸ್ ಅಟ್ಕಿನ್‌ಸನ್‌ಗೆ ಹ್ಯಾಟ್ರಿಕ್ ವಿಕೆಟ್!

ವೆಲ್ಲಿಂಗ್ಟನ್: ಆರ್‌ಸಿಬಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಎಡಗೈ ಬ್ಯಾಟರ್ ಜೇಕಬ್ ಬೆಥೆಲ್ (96 ರನ್, 118 ಎಸೆತ, 10 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಹಾಗೂ ವೇಗಿ ಗಸ್ ಅಟ್ಕಿನ್‌ಸನ್ (31ಕ್ಕೆ 4) ಹ್ಯಾಟ್ರಿಕ್ ವಿಕೆಟ್ ಸಾಧನೆಯ ನೆರವಿನಿಂದ ಪ್ರವಾಸಿ ಇಂಗ್ಲೆಂಡ್ ತಂಡ ಕ್ರೋವ್-ಥೋರ್ಪೆ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಒಟ್ಟಾರೆ 533 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಶನಿವಾರ 5 ವಿಕೆಟ್‌ಗೆ 86 ರನ್‌ಗಳಿಂದ ಪಂದ್ಯದ ಎರಡನೇ ದಿನದಾಟ ಆರಂಭಿಸಿದ ನ್ಯೂಜಿಲೆಂಡ್, ವೇಗಿಗಳಾದ ಅಟ್ಕಿನ್‌ಸನ್ ಹಾಗೂ ಬ್ರೈಡನ್ ಕರ್ಸ್ (46ಕ್ಕೆ 4) ದಾಳಿಗೆ ತತ್ತರಿಸಿ 34.5 ಓವರ್‌ಗಳಲ್ಲಿ 125 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. 155 ರನ್‌ಗಳ ಉಪಯುಕ್ತ ಮುನ್ನಡೆಯೊಂದಿಗೆ ಎರಡನೇ ಸರದಿ ಆರಂಭಿಸಿದ ಆಂಗ್ಲರು ಪ್ರತಿ ಓವರ್‌ಗೆ 5ರ ಸರಾಸರಿಯಲ್ಲಿ ರನ್‌ಪೇರಿಸುವ ಮೂಲಕ ದಿನಂದತ್ಯಕ್ಕೆ 76 ಓವರ್‌ಗಳಲ್ಲಿ 5 ವಿಕೆಟ್‌ಗೆ 378 ರನ್ ಕಲೆಹಾಕಿದ್ದಾರೆ. ಈ ಮೂಕ ಸ್ಟೋಕ್ಸ್ ಪಡೆ ಬೃಹತ್ ಮುನ್ನಡೆಯೊಂದಿಗೆ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ಆರಂಭಿಕ ಜಾಕ್ ಕ್ರೌಲಿ (8) ವಿಕೆಟ್ ಬೇಗನೆ ಕಳೆದುಕೊಂಡಿತು. ಆಗ ಜತೆಯಾದ ಬೆನ್ ಡಕೆಟ್ (92 ರನ್, 112 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಜೇಕಬ್ ಬೆಥೆಲ್ 155 ರನ್‌ಗಳ ಜತೆಯಾಟದಿಂದ ಮುನ್ನಡೆಯನ್ನು ಹಿಗ್ಗಿಸಿದರು. ನಂತರ 65ನೇ ಅರ್ಧಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಬಾರಿ 50 ಪ್ಲಸ್ ರನ್ ಪೇರಿಸಿದ ಜೋ ರೂಟ್ (73* ರನ್, 106 ಎಸೆತ, 5 ಬೌಂಡರಿ) ಜತೆಯಾಗಿ ಬೆನ್ ಸ್ಟೋಕ್ಸ್ (35*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್: 280 ಹಾಗೂ 5 ವಿಕೆಟ್‌ಗೆ 378 (ಕ್ರೌಲಿ 8, ಡಕೆಟ್ 92, ಬೆಥೆಲ್ 96, ರೂಟ್ 73*, ಬ್ರೂಕ್ 55, ಪೋಪ್ 10, ಸ್ಟೋಕ್ಸ್ 35*, ಸೌಥಿ 72ಕ್ಕೆ 2, ಹೆನ್ರಿ 76ಕ್ಕೆ 2). ಕಿವೀಸ್: 34.5 ಓವರ್‌ಗಳಲ್ಲಿ 125 (ಬ್ಲಂಡೆಲ್ 16, ಫಿಲಿಪ್ಸ್ 16*, ಸ್ಮಿತ್ 14, ಅಟ್ಕಿನ್‌ಸನ್ 31ಕ್ಕೆ 4, ಕರ್ಸ್ 46ಕ್ಕೆ 4).

4. ಜೋ ರೂಟ್ ಟೆಸ್ಟನಲ್ಲಿ 100 ಬಾರಿ 50 ಪ್ಲಸ್ ರನ್ ಕಲೆಹಾಕಿದ ವಿಶ್ವದ 4ನೇ ಬ್ಯಾಟರ್. ಸಚಿನ್ ತೆಂಡುಲ್ಕರ್ (119), ಜ್ಯಾಕ್ ಕಾಲೀಸ್ (103), ರಿಕಿ ಪಾಂಟಿಂಗ್ (103) ಮೊದಲ ಮೂವರು ಸಾಧಕರು.

15. ಗಸ್ ಅಟ್ಕಿನ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಇಂಗ್ಲೆಂಡ್ 15ನೇ ಆಟಗಾರ. 2017ರ ಬಳಿಕ ಈ ಸಾಧನೆ ಮಾಡಿದ ಮೊದಲಿಗ.