ಕ್ರೀಡೆ

ಬೆಂಗಳೂರು ಕಾಲ್ತುಳಿತ ಪ್ರಕರಣ; ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ ಆರ್​ಸಿಬಿ! | Bengaluru stampede

Bengaluru stampede: ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 2025 ರ ಜೂನ್ 4 ರಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಅಭಿಮಾನಿಗಳ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಘೋಷಿಸಿದೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಆರ್​ಸಿಬಿ, ತಾನೂ ಹೊಸದಾಗಿ ಆರಂಭಿಸಿರುವ ಆರ್‌ಸಿಬಿ ಕೇರ್ಸ್ ಅಡಿಯಲ್ಲಿ ಈ ನೆರವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಈ ದುರಂತವು ನಗರದ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಕರಾಳ ಕ್ಷಣಗಳಲ್ಲಿ ಒಂದಾಗಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ ತಂಡ ಗೆಲುವು ಸಾಧಿಸಿದ ಕೇವಲ 24 ಗಂಟೆಗಳಲ್ಲಿ ಕ್ರೀಡಾಂಗಣದ ಹೊರಗೆ ಲಕ್ಷಾಂತರ ಅಭಿಮಾನಿಗಳು ಜಮಾಯಿಸಿದ್ದರು, ನಿರೀಕ್ಷೆ ಮೀರಿ ಜನರು ಸೇರಿದ್ದರಿಂದ ನಿಯಂತ್ರಣಕ್ಕೆ ಸಿಗದೆ 11 ಜನರು ಕೊನೆಯುಸಿರೆಳೆದರು.

ಈ ಘಟನೆ ಸಂಭವಿಸಿ ಸುಮಾರು ಮೂರು ತಿಂಗಳ ನಂತರ ಆರ್‌ಸಿಬಿ 25ಲಕ್ಷ ಪರಿಹಾರ ಪ್ಯಾಕೇಜ್‌ ಘೋಷಿಸಿ ಮೃತರ ಕುಟುಂಬಗಳೊಂದಿಗೆ ಯಾವಾಗಲೂ ಇರುವುದಾಗಿ ಘೋಷಿಸಿದೆ.

ಆರ್​​ಸಿಬಿ ಟ್ವೀಟ್​​ನಲ್ಲೇನಿದೆ..?

ಜೂನ್ 4, 2025 ರಂದು ನಮ್ಮ ಹೃದಯಗಳು ಮುರಿದವು. ನಾವು ಆರ್‌ಸಿಬಿ ಕುಟುಂಬದ ಹನ್ನೊಂದು ಸದಸ್ಯರನ್ನು ಕಳೆದುಕೊಂಡೆವು. ಅವರು ನಮ್ಮ ಭಾಗವಾಗಿದ್ದರು. ನಮ್ಮ ನಗರ, ನಮ್ಮ ಸಮುದಾಯ ಮತ್ತು ನಮ್ಮ ತಂಡವನ್ನು ಅನನ್ಯವಾಗಿಸುವ ಭಾಗ. ಅವರ ಅನುಪಸ್ಥಿತಿಯು ನಮ್ಮಲ್ಲಿ ಪ್ರತಿಯೊಬ್ಬರ ನೆನಪುಗಳಲ್ಲಿ ಪ್ರತಿಧ್ವನಿಸುತ್ತದೆ. ಅವರು ಬಿಟ್ಟುಹೋದ ಜಾಗವನ್ನು ಎಷ್ಟೇ ಬೆಂಬಲ ನೀಡಿದರೂ ತುಂಬಲು ಸಾಧ್ಯವಿಲ್ಲ. ಆದರೆ ಮೊದಲ ಹೆಜ್ಜೆಯಾಗಿ ಮತ್ತು ಅತ್ಯಂತ ಗೌರವದಿಂದ, ಆರ್‌ಸಿಬಿ ಅವರ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳನ್ನು ನೀಡಿದೆ. ಕೇವಲ ಆರ್ಥಿಕ ನೆರವಿನಂತೆ ಅಲ್ಲ, ಆದರೆ ಸಹಾನುಭೂತಿ, ಏಕತೆ ಮತ್ತು ನಿರಂತರ ಆರೈಕೆಯ ಭರವಸೆಯಾಗಿ ಎಂದು ಟ್ವೀಟ್​ ಮಾಡಿದೆ

ಜೂನ್‌ನಲ್ಲಿ ಆರ್‌ಸಿಬಿ ಫ್ರಾಂಚೈಸಿ ಮೃತರ ಕುಟುಂಬಗಳಿಗೆ 10 ಲಕ್ಷ ರೂ.ಗಳನ್ನು ಮತ್ತು ಆರ್‌ಸಿಬಿ ಕೇರ್ಸ್ ನಿಧಿಯನ್ನು ರಚಿಸುವ ಮೂಲಕ ಗಾಯಾಳುಗಳಿಗೆ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿತ್ತು. ಜನಸಂದಣಿ ನಿರ್ವಹಣೆಯಲ್ಲಿನ ಲೋಪದೋಷಗಳಿಗೆ ರಾಜ್ಯ ಸರ್ಕಾರ ಆರ್‌ಸಿಬಿಯನ್ನು ಹೊಣೆಯಾಗಿಸಿತು, ಇದರ ನಂತರ ಚಿನ್ನಸ್ವಾಮಿ ಕ್ರೀಡಾಂಗಣವು ಪಂದ್ಯಗಳನ್ನು ನಡೆಸಲು ಅಸುರಕ್ಷಿತವಾಗಿದೆ ಎಂದು ಪರಿಗಣಿಸಿ.

ಮುಂಬರುವ ಮಹಿಳಾ ಏಕದಿನ ವಿಶ್ವಕಪ್‌ನ ಪಂದ್ಯಾವಳಿಯನ್ನು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಯಿತು.(ಏಜೆನ್ಸೀಸ್​​)