ಕ್ರೀಡೆ

ಇಂದು ಆರ್‌ಸಿಬಿ ತಂಡಕ್ಕೆ ಸನ್‌ರೈಸರ್ಸ್‌ ಸವಾಲು, ಗೆಲುವಿನ ಹಳಿ ಏರುವ ತವಕದಲ್ಲಿ ಕೊಹ್ಲಿ ಪಡೆ

raghukittur

ಶಾರ್ಜಾ: ಸತತ 2 ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ಲೇಆಫ್ ಹಂತಕ್ಕೇರುವ ದೃಷ್ಟಿಯಿಂದ ಮಹತ್ವ ಪಡೆದಿರುವ ಐಪಿಎಲ್-13ರ ತನ್ನ 13ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಂದ್ಯ ಉಭಯ ತಂಡಗಳ ಪಾಲಿಗೆ ಮಹತ್ವ ಪಡೆದಿದೆ. ಅಂಕಪಟ್ಟಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ವಿರಾಟ್ ಕೊಹ್ಲಿ ಬಳಗ ಸತತ 2 ಸೋಲು ಕಂಡಿದ್ದು, ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಪ್ಲೇಆಫ್ ಹಾದಿ ಕಠಿಣ ಸ್ಥಿತಿಯಲ್ಲಿದ್ದರೂ ಸನ್‌ರೈಸರ್ಸ್‌ ಕಡೇ ಹಂತದವರೆಗೂ ತನ್ನ ಹೋರಾಟ ಮುಂದುವರಿಸುವ ವಿಶ್ವಾಸದಲ್ಲಿದೆ.

* ಆರ್‌ಸಿಬಿಗೆ ಕಾಡುತ್ತಿರುವ ಅಸ್ಥಿರ ಬ್ಯಾಟಿಂಗ್ 

ಸತತ ಸೋಲು ಕಾಣದೆ, ಗೆಲುವನ್ನು ಕಾಣದೆ ಸ್ಥಿರ ನಿರ್ವಹಣೆ ಮೂಲಕ ಗಮನಸೆಳೆಯುತ್ತಿದ್ದ ಆರ್‌ಸಿಬಿ, ಬ್ಯಾಟಿಂಗ್ ವಿಭಾಗದ ವೈಫಲ್ಯದಿಂದಾಗಿಯೇ ಕಡೇ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಸಿಎಸ್‌ಕೆ ಹಾಗೂ ಮುಂಬೈ ಇಂಡಿಯನ್ಸ್ ಎದುರು ದೊಡ್ಡ ಮೊತ್ತ ಪೇರಿಸಲು ವಿಫಲವಾಗಿದ್ದೇ ತಂಡದ ಸೋಲಿಗೆ ಪ್ರಮುಖ ಕಾರಣ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಕ್ರಿಸ್ ಮಾರಿಸ್‌ರಂಥ ಅನುಭವಿ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್ ಮುಂಬೈ ಬೌಲರ್‌ಗಳ ಎದುರು ಮಂಡಿಯೂರಿದ್ದರು. ಬ್ಯಾಟಿಂಗ್ ವಿಭಾಗ ಲಯಕಂಡುಕೊಂಡು ಬೌಲರ್‌ಗಳಿಗೆ ಸಹಕರಿಸಬೇಕಿದೆ. ಇಸುರು ಉದಾನ, ಮಾರಿಸ್, ಮೊಹಮದ್ ಸಿರಾಜ್, ಸ್ಪಿನ್ ಜೋಡಿ ವಾಷಿಂಗ್ಟನ್ ಸುಂದರ್ ಹಾಗೂ ಯಜುವೇಂದ್ರ ಚಾಹಲ್ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡಕ್ಕೆ ಕಡಿವಾಣ ಹಾಕಲು ಸಜ್ಜಾಗಿದೆ. ಗಾಯದ ಸಮಸ್ಯೆಯಿಂದ ಕಳೆದ ಪಂದ್ಯದಿಂದ

ಹೊರಗುಳಿದಿದ್ದ ನವದೀಪ್ ಸೈನಿ ಲಭ್ಯತೆ ಇನ್ನು ಖಚಿತಗೊಂಡಿಲ್ಲ.

* ಮಾಡಿ ಇಲ್ಲವೇ ಮಡಿ ಸ್ಥಿತಿಯಲ್ಲಿ ಸನ್‌ರೈಸರ್ಸ್‌

ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ ವಿಶ್ವಾಸದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಪ್ಲೇ-ಆಫ್ ಜೀವಂತವಾಗಿರಿಸಿಕೊಳ್ಳಲು ಗೆಲುವೊಂದೆ ಮಾರ್ಗವಾಗಿದೆ. ವೃದ್ಧಿಮಾನ್ ಸಾಹ, ಡೇವಿಡ್ ವಾರ್ನರ್, ಮನೀಷ್ ಪಾಂಡೆ ಒಳಗೊಂಡ ಬ್ಯಾಟಿಂಗ್ ಪಡೆ ಸ್ಫೋಟಕ ಬ್ಯಾಟಿಂಗ್ ತೋರಿತ್ತು. ಸ್ನಾಯುಸೆಳೆತಕ್ಕೆ ಒಳಗಾಗಿರುವ ಸಾಹ ಲಭ್ಯತೆ ಕೂಡ ಇನ್ನು ಖಚಿತಗೊಂಡಿಲ್ಲ. ರಶೀದ್ ಖಾನ್, ತಂಡಕ್ಕೆ ಬೌಲಿಂಗ್ ವಿಭಾಗದಲ್ಲಿ ದೊಡ್ಡ ಶಕ್ತಿಯಾಗಿದ್ದಾರೆ. ಇವರಿಗೆ ಸಂದೀಪ್ ಶರ್ಮ, ಟಿ.ನಟರಾಜನ್ ಅಗತ್ಯ ಸಾಥ್ ನೀಡುತ್ತಿದ್ದಾರೆ.

ಟೀಮ್ ನ್ಯೂಸ್

ಆರ್‌ಸಿಬಿ: ತಂಡ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಖಚಿತ. ಜೋಶ್ ಫಿಲಿಪ್ ಬದಲಿಗೆ ಆರನ್ ಫಿಂಚ್ ವಾಪಸಾಗಬಹುದು. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಡೇಲ್ ಸ್ಟೈನ್ ಬದಲಿಗೆ ಇಸುರು ಉದಾನ ಮರಳಿ ಕಣಕ್ಕಿಳಿಯಬಹುದು. ವೇಗಿ ನವದೀಪ್ ಸೈನಿ ಫಿಟ್ ಆದರೆ ಶಿವಂ ದುಬೆ ಹೊರಗುಳಿಯಬಹುದು.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 5 ವಿಕೆಟ್ ಜಯ.

---------

ಸನ್‌ರೈಸರ್ಸ್‌: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಬಹುದು. ಸಾಹ ಫಿಟ್ ಆಗದಿದ್ದರೆ ಜಾನಿ ಬೇರ್‌ಸ್ಟೋ ವಾಪಸಾಗಲಿದ್ದಾರೆ. ಆಗ ಕೇನ್ ವಿಲಿಯಮ್ಸನ್ ಮತ್ತೆ ಹೊರಗುಳಿಯಬೇಕಾಗುತ್ತದೆ. ಅಬ್ದುಲ್ ಸಮದ್ ಬದಲಿಗೆ ಅಭಿಷೇಕ್ ಶರ್ಮ ಅಥವಾ ಪ್ರಿಯಂ ಗಾರ್ಗ್ ಆಡಬಹುದು.

ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 88 ರನ್ ಜಯ.

ಪಂದ್ಯ ಆರಂಭ: ರಾತ್ರಿ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 15, ಆರ್‌ಸಿಬಿ: 7, ಸನ್‌ರೈಸರ್ಸ್‌: 8

----------------------

ಆರ್‌ಸಿಬಿ ಪ್ಲೇಆಫ್ ಲೆಕ್ಕಾಚಾರ

ಉಳಿದಿರುವ 2 ಪಂದ್ಯಗಳ ಪೈಕಿ ಕನಿಷ್ಠ ಒಂದರಲ್ಲಿ ಗೆದ್ದರೂ ಆರ್‌ಸಿಬಿ ತಂಡದ ಪ್ಲೇಆ್ ಪ್ರವೇಶ ಖಾತ್ರಿಯಾಗಲಿದೆ. ಆರ್‌ಸಿಬಿ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಆರ್‌ಸಿಬಿ ತಂಡಕ್ಕೆ ಒತ್ತಡವಿಲ್ಲದಿದ್ದರೂ ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನ ಪಡೆಯುವ ದೃಷ್ಟಿಯಿಂದ ಈ ಪಂದ್ಯವೂ ಮಹತ್ವ ಪಡೆದಿದೆ. ಮತ್ತೊಂದೆಡೆ, ಸನ್‌ರೈಸರ್ಸ್‌ ತಂಡ ಆರ್‌ಸಿಬಿ ವಿರುದ್ಧ ಸೋತರೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಲೀಗ್‌ನಿಂದ ಹೊರಬೀಳಲಿದೆ.