ಕ್ರೀಡೆ

ಇಂದು ಆರ್‌ಸಿಬಿ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಸವಾಲು

ಅಬುಧಾಬಿ: ಐಪಿಎಲ್ 13ನೇ ಆವೃತ್ತಿಯಲ್ಲಿ ಕಳೆದ 2 ವಾರಗಳಿಂದ ಪ್ರತಿ ದಿನ ಒಂದೇ ಪಂದ್ಯಕ್ಕೆ ಸಾಕ್ಷಿಯಾಗುತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಶನಿವಾರ ಡಬಲ್ ಧಮಾಕಾದ ಸಂಭ್ರಮ. ಇನ್ನು ಪ್ರತಿ ವಾರಾಂತ್ಯದ ದಿನಗಳಲ್ಲಿ ತಲಾ 2 ಪಂದ್ಯಗಳನ್ನು ಸವಿಯುವ ಅವಕಾಶ ಲಭಿಸಲಿದ್ದು, ಆರ್‌ಸಿಬಿ ತಂಡದಿಂದಲೇ ಈ ಡಬಲ್ ಹೆಡರ್‌ಗೆ ಚಾಲನೆ ಸಿಗುತ್ತಿದೆ. ವಿರಾಟ್ ಕೊಹ್ಲಿ ಸಾರಥ್ಯದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ತನ್ನ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಹಿಂದಿನ 3 ಪಂದ್ಯಗಳನ್ನು ದುಬೈನಲ್ಲಿ ಆಡಿದ್ದ ಆರ್‌ಸಿಬಿ ಶನಿವಾರ ಮೊದಲ ಬಾರಿಗೆ ಅಬುಧಾಬಿಯ ಶೇಖ್ ಜಯೆದ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲಿದೆ. ಹಿಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೂಪರ್ ಓವರ್ ಮೂಲಕ ರೋಚಕ ಗೆಲುವು ದಾಖಲಿಸಿದ್ದ ಆರ್‌ಸಿಬಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಉಭಯ ತಂಡಗಳು ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ ತಲಾ 2 ಗೆಲುವು ಸಾಧಿಸಿ, ಏಕೈಕ ಸೋಲು ಕಂಡಿವೆ. ಪ್ರಸಕ್ತ ಟೂರ್ನಿಯಲ್ಲಿ ಮಧ್ಯಾಹ್ನದ ವೇಳೆ (ಸ್ಥಳೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭ) ನಡೆಯುತ್ತಿರುವ ಮೊದಲ ಪಂದ್ಯ ಇದಾಗಿದ್ದು, ಅರಬ್ ರಾಷ್ಟ್ರದ ಬಿಸಿಲಿನ ಸವಾಲನ್ನು ಆಟಗಾರರ ಮೆಟ್ಟಿನಿಲ್ಲಬೇಕಾಗಿದೆ.

ಆತ್ಮವಿಶ್ವಾಸದಲ್ಲಿ ಕೊಹ್ಲಿ ಬಳಗ

ಬ್ಯಾಟಿಂಗ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿ ಇತರ ಬ್ಯಾಟ್ಸ್‌ಮನ್‌ಗಳು ನ್ಯಾಯ ಒದಗಿಸುತ್ತಿದ್ದರೂ ಫೀಲ್ಡಿಂಗ್ ಹಾಗೂ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಸುಧಾರಿಸಬೇಕಿದೆ. ಮುಂಬೈ ವಿರುದ್ಧ ಆರಂಭಿಕ ಹಂತದಲ್ಲಿ ಕಡಿವಾಣ ಹಾಕಿದ್ದರೂ ಕಡೇ 4 ಓವರ್‌ಗಳಲ್ಲಿ 79 ರನ್ ಬಿಟ್ಟುಕೊಟ್ಟಿದ್ದೇ ಇದಕ್ಕೆ ಸಾಕ್ಷಿ. ಕಳೆದ ಪಂದ್ಯದಲ್ಲಿ ಮೂರು ಬದಲಾವಣೆಯೊಂದಿಗೆ ಆರ್‌ಸಿಬಿ ಆಡಿತ್ತು. ವಿರಾಟ್ ಕೊಹ್ಲಿ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆಯಾಗಿದೆ.

ಗೆಲುವಿನ ಹಳಿಗೆ ಮರಳಲು ರಾಯಲ್ಸ್ ತವಕ

ಕೆಕೆಆರ್ ವಿರುದ್ಧ ಸೋಲುವ ಮೂಲಕ ಹ್ಯಾಟ್ರಿಕ್ ಗೆಲುವಿನ ಅವಕಾಶ ತಪ್ಪಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ಕನ್ನಡಿಗ ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಇದುವರೆಗೆ ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳದ ಹಿನ್ನೆಲೆಯಲ್ಲಿ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್‌ಗೆ ತಂಡ ಮತ್ತೆ ಮಣೆಹಾಕುವ ಸಾಧ್ಯತೆಗಳಿವೆ. ಜೈಸ್ವಾಲ್ ಅವಕಾಶ ಗಿಟ್ಟಿಸಿಕೊಂಡರೆ, ಸ್ಮಿತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಅಂಕಿತ್ ರಜಪೂತ್ ಬದಲಿಗೆ ವರುಣ್ ಆರನ್‌ಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.

ಟೀಮ್ ನ್ಯೂಸ್:

ಆರ್‌ಸಿಬಿ: ಆಲ್ರೌಂಡರ್ ಕ್ರಿಸ್ ಮಾರಿಸ್ ಲಭ್ಯತೆ ಇನ್ನೂ ಖಾತ್ರಿಯಾಗಿಲ್ಲ. ಗುರುವಾರ ಸಂಜೆ ಕೆಲಕಾಲ ನೆಟ್ಸ್‌ನಲ್ಲಿ ಬ್ಯಾಟಿಂಗ್, ಬೌಲಿಂಗ್ ಅಭ್ಯಾಸ ಮಾಡಿದ್ದರೂ ಆಡುವರೇ ಎಂಬುದು ಸ್ಪಷ್ಟವಾಗಿಲ್ಲ. ಒಂದು ವೇಳೆ ಮಾರಿಸ್ ಲಭ್ಯರಾದರೆ ಇಸುರು ಉದಾನ ಅಥವಾ ಆಡಂ ಜಂಪಾ ಪಂದ್ಯದಿಂದ ಹೊರಗುಳಿಯಬೇಕಾಗುತ್ತದೆ.

ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್‌ (ವಿಕೀ), ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ಕ್ರಿಸ್ ಮಾರಿಸ್/ಆಡಂ ಜಂಪಾ, ವಾಷಿಂಗ್ಟನ್ ಸುಂದರ್, ನವದೀಪ್ ಸೈನಿ, ಇಸುರು ಉದಾನ, ಯಜುವೇಂದ್ರ ಚಾಹಲ್.

ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು ಸೂಪರ್ ಓವರ್‌ನಲ್ಲಿ ಜಯ.

ರಾಜಸ್ಥಾನ ರಾಯಲ್ಸ್: ಮೊದಲ ಪಂದ್ಯದ ಬಳಿಕ ಯುವ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರನ್ನು ಕಳೆದ ಎರಡು ಪಂದ್ಯಗಳಿಂದ ಕೈಬಿಡಲಾಗಿತ್ತು. ಸತತ 3 ಪಂದ್ಯಗಳಿಂದ ರನ್ ಗಳಿಸಲು ಪರದಾಡುತ್ತಿರುವ ರಾಬಿನ್ ಉತ್ತಪ್ಪ ಬದಲಿಗೆ ಜೈಸ್ವಾಲ್ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ. ಅಥವಾ ಮನನ್ ವೊಹ್ರಾ ಅವಕಾಶ ಪಡೆದರೂ ಅಚ್ಚರಿ ಇಲ್ಲವೆನಿಸಿದೆ. ಕನ್ನಡಿಗ ಶ್ರೇಯಸ್ ಗೋಪಾಲ್ ದುಬಾರಿಯಾಗುತ್ತಿದ್ದರೂ, ಆರ್‌ಸಿಬಿ ವಿರುದ್ಧ ಉತ್ತಮ ದಾಖಲೆ ಹೊಂದಿರುವುದರಿಂದ ಮತ್ತೊಂದು ಅವಕಾಶ ಗಿಟ್ಟಿಸಿಕೊಳ್ಳಬಹುದು.

ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್/ಮನನ್ ವೋಹ್ರಾ, ಜೋಸ್ ಬಟ್ಲರ್ (ವಿಕೀ), ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಟಾಮ್ ಕರ‌್ರನ್, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ಅಂಕಿತ್ ರಜಪೂತ್, ಜೈದೇವ್ ಉನಾದ್ಕತ್.

ಕಳೆದ ಪಂದ್ಯ: ಕೆಕೆಆರ್ ಎದುರು 37 ರನ್‌ಗಳಿಂದ ಸೋಲು.

3: ಶ್ರೇಯಸ್ ಗೋಪಾಲ್ ಕೇವಲ 40 ಎಸೆತಗಳ ಅಂತರದಲ್ಲಿ 3 ಬಾರಿ ವಿರಾಟ್ ಕೊಹ್ಲಿ ಹಾಗೂ 4 ಬಾರಿ ಎಬಿ ಡಿವಿಲಿಯರ್ಸ್‌ ಅವರನ್ನು ಔಟ್ ಮಾಡಿದ್ದಾರೆ. ಸತತ ಮೂರು ಬಾರಿ ಇಬ್ಬರನ್ನು ಒಂದೇ ಪಂದ್ಯದಲ್ಲಿ ಔಟ್ ಮಾಡಿದ್ದರು.

3: ಸಂಜು ಸ್ಯಾಮ್ಸನ್ ಅವರನ್ನು ಯಜುವೇಂದ್ರ ಚಾಹಲ್ ಕೇವಲ 23 ರನ್‌ಗಳ ಅಂತರದಲ್ಲಿ 3 ಬಾರಿ ಔಟ್ ಮಾಡಿದ್ದಾರೆ.

1: ಉಭಯ ತಂಡಗಳ ವೇಗದ ಬೌಲರ್‌ಗಳು ಪವರ್ ಪ್ಲೇನಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಈ ಹಂತದಲ್ಲಿ ಎರಡು ತಂಡಗಳ ವೇಗಿಗಳು ತಲಾ ಒಂದು ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಮುಖಾಮುಖಿ: 20, ಆರ್‌ಸಿಬಿ: 8, ರಾಜಸ್ಥಾನ: 10, ರದ್ದು: 2.