ಅಬುಧಾಬಿ: ಅರಬ್ ನಾಡಿನಲ್ಲಿ ಆರಂಭಿಕ ಎರಡು ಪಂದ್ಯಗಳ ಸೋಲಿನ ಬಳಿಕ ಹ್ಯಾಟ್ರಿಕ್ ಗೆಲುವಿನೊಂದಿಗೆ ಪ್ಲೇಆ್ ಖಾತ್ರಿಪಡಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಹಣಾಹಣಿಗೆ ಸಜ್ಜಾಗಿದೆ. ಇದುವರೆಗೆ ಆಡಿರುವ 12 ಪಂದ್ಯಗಳಿಂದ 16 ಅಂಕ ಕಲೆಹಾಕಿರುವ ಆರ್‌ಸಿಬಿ ಐಪಿಎಲ್-14ರ ತನ್ನ 13ನೇ ಪಂದ್ಯದಲ್ಲಿ, ಈಗಾಗಲೇ ಲೀಗ್‌ನಲ್ಲಿ ಲೆಕ್ಕಾಚಾರ ಮುಕ್ತಾಯಗೊಳಿಸಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಶೇಖ್ ಜಯೇದ್ ಸ್ಟೇಡಿಯಂನಲ್ಲಿ ಬುಧವಾರ ಎದುರಿಸಲಿದೆ. ಲೀಗ್ ಪುನಾರಾರಂಭದಿಂದಲೂ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲೇ ಇರುವ ಆರ್‌ಸಿಬಿ ತಂಡ, ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ. ಆರ್‌ಸಿಬಿ ಲೀಗ್ ಹಂತದಲ್ಲಿ ಉಳಿದ 2 ಪಂದ್ಯಗಳಲ್ಲೂ ಜಯ ದಾಖಲಿಸಿದರೆ 20 ಅಂಕ ಗಳಿಸಲಿದ್ದು, ಅಗ್ರ 2 ತಂಡಗಳ ಪೈಕಿ ಒಂದಾಗುವ ಅವಕಾಶ ಹೊಂದಿದೆ.
* ಆತ್ಮವಿಶ್ವಾಸದಲ್ಲಿ ಕೊಹ್ಲಿ ಬಳಗ
ಯುಎಇಯಲ್ಲಿ ಆಡಿದ ಆರಂಭಿಕ ಎರಡೂ ಪಂದ್ಯಗಳಲ್ಲಿ ಕೆಕೆಆರ್ ಹಾಗೂ ಸಿಎಸ್‌ಕೆ ಎದುರು ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ, ಪುಟಿದೇಳುವ ಮೂಲಕ ಸತತ ಎರಡನೇ ಬಾರಿಗೆ ಪ್ಲೇಆಫ್ ಹಂತಕ್ಕೇರಿದೆ. ನಾಯಕ ವಿರಾಟ್ ಕೊಹ್ಲಿ ಹಾಗೂ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಜೋಡಿ ಉತ್ತಮ ಆರಂಭ ನೀಡುತ್ತಿದ್ದರೆ, ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಫೋಟಿಸುತ್ತಿರುವುದು ತಂಡದ ವಿಶ್ವಾಸ ಹೆಚ್ಚಿಸಿದೆ. ಮಿ.360 ಖ್ಯಾತಿಯ ಎಬಿ ಡಿವಿಲಿಯರ್ಸ್ ಇದುವರೆಗೆ ಸ್ಫೋಟಿಸಿಲ್ಲ. ವೇಗಿಗಳಾದ ಹರ್ಷಲ್ ಪಟೇಲ್, ಮೊಹಮದ್ ಸಿರಾಜ್, ಜಾರ್ಜ್ ಗಾರ್ಟನ್ ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ಆರ್‌ಸಿಬಿ ಸಮತೋಲನ ಹೊಂದಿದೆ.
*ಸನ್‌ರೈಸರ್ಸ್‌ಗೆ ಗೆಲುವಿನ ಕನವರಿಕೆ
ಈಗಾಗಲೇ 10 ಸೋಲು ಕಂಡು ಅಂಕಪಟ್ಟಿಯಲ್ಲೇ ಕಡೇ ಸ್ಥಾನ ಖಚಿತಪಡಿಸಿಕೊಂಡಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕಡೇ ಎರಡು ಪಂದ್ಯಗಳನ್ನಾದರೂ ಜಯ ದಾಖಲಿಸಿ ಲೀಗ್‌ಗೆ ಗೆಲುವಿನ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ. ಲೀಗ್‌ನ ಎರಡನೇ ಚರಣದಲ್ಲಿ ಇದುವರೆಗೆ ಆಡಿದ 5 ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಸನ್‌ರೈಸರ್ಸ್‌ಗೆ ಪ್ರಸಕ್ತ ಆವೃತ್ತಿಯಲ್ಲಿ ಗೆಲುವೆಂಬುದೇ ಬಹುದೂರ ಉಳಿಯಿತು. ಲೀಗ್ ಪಂದ್ಯದಲ್ಲಿ ತಂಡದ ನಾಯಕತ್ವ ಸ್ಥಾನದಿಂದ ಡೇವಿಡ್ ವಾರ್ನರ್ ಅವರನ್ನು ಬದಲಿಸಿ, ಕೇನ್ ವಿಲಿಯಮ್ಸನ್‌ಗೆ ಮಣೆ ಹಾಕಿದರೂ ತಂಡದ ಹಣೆಬರಹ ಮಾತ್ರ ಬದಲಾಗಲಿಲ್ಲ. ಆರಂಭಿಕ ಜಾನಿ ಬೇರ್‌ಸ್ಟೋ ಕಡೇ ಹಂತದಲ್ಲಿ ಲೀಗ್‌ನಿಂದ ದೂರ ಉಳಿದಿದ್ದು ತಂಡದ ಬ್ಯಾಟಿಂಗ್ ಸಂಯೋಜನೆಗೆ ಭಾರಿ ಪೆಟ್ಟು ನೀಡಿತು. ತಂಡದ ಸರ್ವಾಂಗೀಣ ವಿಭಾಗದಲ್ಲೂ ವೈಫಲ್ಯ ಅನುಭವಿಸಿದ್ದು, ತಂಡ ಹಿನ್ನಡೆಗೆ ಪ್ರಮುಖ ಕಾರಣ. ಹಿರಿಯರಾದ ಭುವನೇಶ್ವರ್ ಕುಮಾರ್, ಸಿದ್ಧಾರ್ಥ್ ಕೌಲ್ ನಿರಾಸೆ ಮೂಡಿಸಿದರೆ, ಕಾಶ್ಮೀರದ ಯುವ ಕ್ರಿಕೆಟಿಗ ಉಮ್ರಾನ್ ಮಲಿಕ್ ಪದಾರ್ಪಣೆ ಪಂದ್ಯದಲ್ಲೇ ಗಮನಸೆಳೆದಿದ್ದಾರೆ. ಲೆಗ್ ಸ್ಪಿನ್ನರ್ ರಶೀದ್ ಖಾನ್ ನಿರೀಕ್ಷಿತ ಮಟ್ಟಿಗೆ ಉತ್ತಮ ನಿರ್ವಹಣೆ ತೋರದಿರುವುದು ತಂಡಕ್ಕೆ ಹಿನ್ನಡೆಯಾಯಿತು.
ಮುಖಾಮುಖಿ: 18
ಆರ್‌ಸಿಬಿ: 8
ಸನ್‌ರೈಸರ್ಸ್: 10
ಹಿಂದಿನ ಮುಖಾಮುಖಿ: ಆರ್‌ಸಿಬಿಗೆ 6 ರನ್ ಜಯ
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.