ಶಾರ್ಜಾ: ಸತತ ಎರಡನೇ ಬಾರಿಗೆ ಪ್ಲೇಆಫ್ ಹಂತಕ್ಕೇರಿದ ಸಾಧನೆ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಎರಡು ಬಾರಿಯ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ಐಪಿಎಲ್-14ರ ಎಲಿಮಿನೇಟರ್ ಕದನದಲ್ಲಿ ಸೋಮವಾರ ಎದುರಾಗಲಿವೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕದನ ಉಭಯ ತಂಡಗಳ ಪಾಲಿಗೆ ಕ್ವಾರ್ಟರ್ ಫೈನಲ್ ಹಣಾಹಣಿಯಂತಿದೆ. ಪ್ರಸಕ್ತ ಆವೃತ್ತಿ ಬಳಿಕ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಲು ಆರ್‌ಸಿಬಿಗೆ ಕಡೇ ಅವಕಾಶ ಇದಾಗಿದೆ. ಕೊಹ್ಲಿ ನಾಯಕತ್ವದಲ್ಲಿ ಆರ್‌ಸಿಬಿ 2016ರಲ್ಲಿ ಕಡೇ ಬಾರಿಗೆ ಫೈನಲ್ ಪ್ರವೇಶಿಸಿದ್ದರೆ, 2015 ಹಾಗೂ 2020ರಲ್ಲಿ ಪ್ಲೇಆಫ್ ಹಂತಕ್ಕೇರಿದ ಸಾಧನೆ ಮಾಡಿತ್ತು. ಲೀಗ್ ಹಂತದ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯದಲ್ಲಿ ಜಯ ದಾಖಲಿಸಿ ಸಮಬಲ ಸಾಧಿಸಿವೆ.
* ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಟ್ರೋಫಿಯೊಂದಿಗೆ ವಿದಾಯ ಹೇಳಲು ಆರ್‌ಸಿಬಿ ಆಟಗಾರರು ಸಜ್ಜಾಗಿದ್ದಾರೆ. ಇನ್ಮುಂದೆ ಆರ್‌ಸಿಬಿ ಪರ ಕೇವಲ ಆಟಗಾರನಾಗಿ ಉಳಿಯುವುದಾಗಿ ಕೊಹ್ಲಿ ಟೂರ್ನಿ 2ನೇ ಚರಣ ಆರಂಭಕ್ಕೆ ಮುನ್ನ ಘೋಷಿಸಿದ್ದರು. ಆರ್‌ಸಿಬಿ ಲೀಗ್ ಹಂತದ ಕಡೇ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು ರೋಚಕ ಗೆಲುವು ದಾಖಲಿಸಿತ್ತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 18 ಅಂಕ ಸಂಗ್ರಹಿಸಿದ್ದ ಆರ್‌ಸಿಬಿ, 3ನೇ ಸ್ಥಾನದೊಂದಿಗೆ ಪ್ಲೇಆಫ್ ಹಂತಕ್ಕೇರಿತ್ತು. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಲಯದಲ್ಲಿದ್ದರೂ, ಅವರ ಆರಂಭಿಕ ಜತೆಗಾರ ದೇವದತ್ ಪಡಿಕಲ್ ಕಳೆದ ಕೆಲ ಪಂದ್ಯಗಳಿಂದ ಕೊಂಚ ಲಯ ತಪ್ಪಿದ್ದಾರೆ. ಉಳಿದಂತೆ, ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸ್‌ವೆಲ್, ಕೆ.ಎಸ್. ಭರತ್ ಭರ್ಜರಿ ಫಾರ್ಮ್‌ನಲ್ಲಿದ್ದರೆ, ಎಬಿ ಡಿವಿಲಿಯರ್ಸ್ ಯುಎಇ ನೆಲದಲ್ಲಿ ಇನ್ನು ಸಿಡಿದಿಲ್ಲ. ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಜಾರ್ಜ್ ಗಾರ್ಟನ್ ಹಾಗೂ ಮೊಹಮದ್ ಸಿರಾಜ್ ಒಳಗೊಂಡ ಬೌಲಿಂಗ್ ಪಡೆ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಹೊಂದಿದೆ.
* ಕೆಕೆಆರ್‌ಗೆ ಗೆಲುವಿನ ತವಕ
ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಕಡೇ ಕ್ಷಣದಲ್ಲಿ ಪ್ಲೇಆಫ್ ಹಂತಕ್ಕೇರಿರುವ ಕೆಕೆಆರ್ ತಂಡ ಗೆಲುವಿನ ತವಕದಲ್ಲಿದೆ. ಭಾರತದಲ್ಲಿ ನಡೆದ ಮೊದಲ ಚರಣದಲ್ಲಿ ಪಂದ್ಯಗಳಲ್ಲಿ ಹೀನಾಯ ನಿರ್ವಹಣೆ ತೋರಿದ್ದ ಕೆಕೆಆರ್, ಯುಎಇ ನೆಲದಲ್ಲಿ ಭರ್ಜರಿ ಆಟವಾಡಿದೆ. ಎರಡನೇ ಭಾಗದಲ್ಲಿ ಆಡಿದ 7 ಪಂದ್ಯಗಳಲ್ಲಿ 5 ಜಯ ದಾಖಲಿಸುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿತ್ತು. ಯುಎಇ ಚರಣದ ಲೀಗ್ ಪಂದ್ಯಗಳಲ್ಲಿ ಅತ್ಯಧಿಕ ಗೆಲುವು ಕಂಡ ಸಾಧನೆಯೂ ಕೆಕೆಆರ್ ತಂಡದ್ದಾಗಿದೆ. ಇವೊಯಿನ್ ಮಾರ್ಗನ್ ಬ್ಯಾಟ್ಸ್‌ಮನ್ ಆಗಿ ವಿಫಲಗೊಳ್ಳುತ್ತಿದ್ದರೂ, ಚಾಣಾಕ್ಷ ನಾಯಕತ್ವದಲ್ಲಿ ಗಮನಸೆಳೆಯುತ್ತಿದ್ದಾರೆ. ಶುಭಮಾನ್ ಗಿಲ್, ರಾಹುಲ್ ತ್ರಿಪಾಠಿ, ವೆಂಕಟೇಶ್ ಅಯ್ಯರ್‌ರಂಥ ಯುವ ಬ್ಯಾಟರ್‌ಗಳು ಸ್ಫೋಟಿಸುತ್ತಿದ್ದರೆ, ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಲಾಕಿ ರ್ಗ್ಯುಸನ್, ಶಿವಂ ಮಾವಿ ಒಳಗೊಂಡ ಬೌಲಿಂಗ್ ಪಡೆ ಉತ್ತಮ ನಿರ್ವಹಣೆ ತೋರುತ್ತಿದೆ.
ಟೀಮ್ ನ್ಯೂಸ್:
ಆರ್‌ಸಿಬಿ: ಡೆಲ್ಲಿ ಎದುರು ಕಡೇ ಲೀಗ್ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ. ಉತ್ತಮ ನಿರ್ವಹಣೆ ತೋರುತ್ತಿರುವ ವಿದೇಶಿ ಆಟಗಾರರಾದ ಡೇನಿಯಲ್ ಕ್ರಿಶ್ಚಿಯನ್ ಹಾಗೂ ಜಾರ್ಜ್ ಗಾರ್ಟನ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ.
ಕೆಕೆಆರ್: ಆಂಡ್ರೆ ರಸೆಲ್ ಫಿಟ್ ಆಗಿದ್ದು, ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ರಸೆಲ್ ಸ್ಥಾನ ಪಡೆದರೆ ಶಕೀಬ್ ಅಲ್ ಹಸನ್ ಅಥವಾ ಲಾಕಿ ಫರ್ಗ್ಯುಸನ್ ಹೊರಗುಳಿಯುವರು.
*ಮುಖಾಮುಖಿ: 28, ಆರ್‌ಸಿಬಿ: 13, ಕೆಕೆಆರ್: 15
ಲೀಗ್ ಮುಖಾಮುಖಿ: ತಲಾ ಒಂದು ಪಂದ್ಯಗಳಲ್ಲಿ ಜಯ.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
* 2: ಆರ್‌ಸಿಬಿ ವೇಗಿ ಮೊಹಮದ್ ಸಿರಾಜ್, ಇನ್ನು ಎರಡು ವಿಕೆಟ್ ಕಬಳಿಸಿದರೆ ಐಪಿಎಲ್‌ನಲ್ಲಿ 50 ವಿಕೆಟ್ ಕಬಳಿಸಿದಂತಾಗುತ್ತದೆ. ಡೆಲ್ಲಿ ಎದುರು ಎಲಿಮಿನೇಟರ್ ಕದನದಲ್ಲಿ ಕಣಕ್ಕಿಳಿದರೆ ಐಪಿಎಲ್‌ನಲ್ಲಿ 50ನೇ ಪಂದ್ಯವಾಡಿದಂತಾಗುತ್ತದೆ.
* 4: ವಿರಾಟ್ ಕೊಹ್ಲಿ, 4 ಬೌಂಡರಿ ಸಿಡಿಸಿದರೆ ಟಿ20 ಕ್ರಿಕೆಟ್‌ನಲ್ಲಿ 900 ಬೌಂಡರಿ ಬಾರಿಸಿದಂತಾಗುತ್ತದೆ.