*5ನೇ ಜಯದತ್ತ ಆರ್‌ಸಿಬಿ ಚಿತ್ತ
ಲೀಗ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಭರ್ಜರಿ ಆರಂಭ ಕಂಡಿರುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ಗೆಲುವಿನ ಲಯದಲ್ಲಿದೆ. ಕಳೆದ ಪಂದ್ಯದಲ್ಲಿ ಕರ್ನಾಟಕದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕಲ್ ಚೊಚ್ಚಲ ಶತಕ ಸಿಡಿಸಿ ಮಿಂಚಿದರೆ, ಕೊಹ್ಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಉಳಿದಂತೆ ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಶಾಬಾಜ್ ಅಹ್ಮದ್ ಸರ್ವಾಂಗೀಣ ನಿರ್ವಹಣೆ ಮೂಲಕ ಮಿಂಚುತ್ತಿದ್ದರೆ, ಮೊಹಮದ್ ಸಿರಾಜ್-ಹರ್ಷಲ್ ಪಟೇಲ್ ವೇಗದ ಜೋಡಿ ಡೆತ್ ಓವರ್‌ನಲ್ಲಿ ಎದುರಾಳಿ ತಂಡಕ್ಕೆ ಕಡಿವಾಣ ಹಾಕುವ ಸಾಮರ್ಥ್ಯ ಪ್ರದರ್ಶಿಸಿದೆ. ವಾಷಿಂಗ್ಟನ್ ಸುಂದರ್ ಹಾಗೂ ಯಜುವೇಂದ್ರ ಚಾಹಲ್ ಸ್ಪಿನ್ ಜೋಡಿ ಗಮನಸೆಳೆಯುತ್ತಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಹಿಂದಿನ ನಾಲ್ಕು ಪಂದ್ಯಗಳಲ್ಲೂ ಪ್ರಭುತ್ವ ಸಾಧಿಸಿರುವ ಆರ್‌ಸಿಬಿ ಸತತ 5ನೇ ಜಯದತ್ತ ಕಣ್ಣಿಟ್ಟಿದೆ.
*ಗೆಲುವಿನ ವಿಶ್ವಾಸದಲ್ಲಿ ಸಿಎಸ್‌ಕೆ
ಹ್ಯಾಟ್ರಿಕ್ ಗೆಲುವಿನಿಂದ ಬೀಗುತ್ತಿರುವ ಸಿಎಸ್‌ಕೆ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಲೀಗ್‌ನಲ್ಲಿ ಆರ್‌ಸಿಬಿ ಎದುರು ಹೆಚ್ಚು ಗೆಲುವು ದಾಖಲಿಸಿರುವ ಇತಿಹಾಸ ಹೊಂದಿದೆ. ಸುರೇಶ್ ರೈನಾ ಬ್ಯಾಟಿಂಗ್‌ನಲ್ಲಿ ಆಧಾರವಾದರೆ, ಮೊಯಿನ್ ಅಲಿ, ರವೀಂದ್ರ ಜಡೇಜಾ ಆಲ್ರೌಂಡರ್ ಜೋಡಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸೈ ಎನಿಸಿಕೊಂಡಿದೆ. ವೇಗಿ ದೀಪಕ್ ಚಹರ್‌ಗೆ ಮತ್ತೋರ್ವ ವೇಗಿ ಶಾರ್ದೂಲ್ ಠಾಕೂರ್ ಸೂಕ್ತ ಸಾಥ್ ನೀಡುತ್ತಿಲ್ಲ. ಶಾರ್ದೂಲ್ ದುಬಾರಿಯಾಗುತ್ತಿರುವುದು ತಂಡದ ಚಿಂತಕರ ಛಾವಡಿಯನ್ನು ಚಿಂತೆಗೀಡುಮಾಡಿದೆ. ಕಳೆದ ಪಂದ್ಯದಲ್ಲಿ ಕೆಕೆಆರ್‌ಗೆ ಆರಂಭಿಕ ಆಘಾತ ನೀಡಿದರೂ ಬಳಿಕ ಬೌಲರ್‌ಗಳು ದುಬಾರಿಯಾಗಿದ್ದರು. ಕೂದಲೆಳೆ ಅಂತರದಲ್ಲಿ ಸಿಎಸ್‌ಕೆ ಸೋಲು ತಪ್ಪಿಸಿಕೊಂಡಿತ್ತು.
ಆರ್‌ಸಿಬಿ: ಗೆಲುವಿನ ಲಯದಲ್ಲಿರುವ ಆರ್‌ಸಿಬಿ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಕಣಕ್ಕಿಳಿಸಲಿದೆ. ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.
ಕಳೆದ ಪಂದ್ಯ: ರಾಜಸ್ಥಾನ ರಾಯಲ್ಸ್ ಎದುರು 10 ವಿಕೆಟ್ ಜಯ
ಸಿಎಸ್‌ಕೆ: ಆರಂಭಿಕ ಋತುರಾಜ್ ಗಾಯಕ್ವಾಡ್ ಕಳೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ತಂಡದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.
ಕಳೆದ ಪಂದ್ಯ: ಕೆಕೆಆರ್ ಎದುರು 18 ರನ್ ಜಯ.
ಮುಖಾಮುಖಿ: 26, ಆರ್‌ಸಿಬಿ: 9, ಸಿಎಸ್‌ಕೆ: 16, ರದ್ದು: 1
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಆರಂಭ: ಮಧ್ಯಾಹ್ನ 3.30ಕ್ಕೆ
*26: ಎಬಿಡಿ ಇನ್ನು 26 ರನ್ ಗಳಿಸಿದರೆ ಐಪಿಎಲ್‌ನಲ್ಲಿ 5 ಸಾವಿರ ರನ್ ಪೂರೈಸಿದ 6ನೇ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ.
*1: ಕೊಹ್ಲಿ (887) ಮತ್ತು ಧೋನಿ (823) ಉಭಯ ತಂಡಗಳ ವಿರುದ್ಧ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.